ಭಾರತದ ಅಭಿವೃದ್ಧಿ ಪಯಣದ ಮುಂದುವರಿಕೆಗೆ ಜನಾದೇಶ: ರಾಷ್ಟ್ರಪತಿ ರಾಮನಾಥ ಕೋವಿಂದ್

Update: 2019-06-20 17:26 GMT

ಹೊಸದಿಲ್ಲಿ,ಜೂ.20: ಐದು ವರ್ಷಗಳ ಹಿಂದೆ ಆರಂಭಗೊಂಡಿದ್ದ ದೇಶದ ಅಭಿವೃದ್ಧಿ ಪಯಣದ ವೇಗವರ್ಧನೆಗಾಗಿ ಭಾರತದ ಜನತೆ ಸ್ಪಷ್ಟ ಆದೇಶವನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಇಲ್ಲಿ ಹೇಳಿದರು.

ನರೇಂದ್ರ ಮೋದಿ ಸರಕಾರವು ಸದೃಢ,ಸುಭದ್ರ ಮತ್ತು ಎಲ್ಲರನ್ನೂ ಒಳಗೊಂಡ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದೂ ಅವರು ಹೇಳಿದರು.

ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳ ಜಂಟಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಷ್ಟ್ರಪತಿಗಳು,ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ ಎಂದು ಬೆಟ್ಟು ಮಾಡಿದರು.

ಲೋಕಸಭೆಗೆ ಈ ಬಾರಿ 78 ಮಹಿಳೆಯರು ಆಯ್ಕೆಯಾಗಿದ್ದಾರೆ ಮತ್ತು ಇದು ಸಾರ್ವಕಾಲಿಕ ದಾಖಲೆಯಾಗಿದೆ, ಈ ಪೈಕಿ ಸರಿಸುಮಾರು ಅರ್ಧದಷ್ಟು ಮಹಿಳೆಯರು ಮೊದಲ ಬಾರಿ ಲೋಕಸಭೆಯನ್ನು ಪ್ರವೇಶಿಸಿದ್ದಾರೆ ಎಂದು 17ನೇ ಲೋಕಸಭೆ ರಚನೆಯ ಬಳಿಕ ತನ್ನ ಸಾಂಪ್ರದಾಯಿಕ ಭಾಷಣದಲ್ಲಿ ರಾಷ್ಟ್ರಪತಿಗಳು ಹೇಳಿದರು.

 ಸರಕಾರದ ಮೊದಲ ಅಧಿಕಾರಾವಧಿಯ ಮೌಲ್ಯಮಾಪನದ ಬಳಿಕ ಜನರು ಈ ಚುನಾವಣೆಯಲ್ಲಿ ದೇಶದ ಜನರು ಅತ್ಯಂತ ಸ್ಪಷ್ಟ ಆದೇಶವನ್ನು ನೀಡಿದ್ದಾರೆ ಮತ್ತು ತನ್ಮೂಲಕ 2014ರಲ್ಲಿ ಆರಂಭಿಸಲಾಗಿದ್ದ ಅಭಿವೃದ್ಧಿ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡುವಂತೆ ನಿರ್ದೇಶ ನೀಡಿದ್ದಾರೆ ಎಂದರು.

ರೈತರು ಮತ್ತು ಸಣ್ಣ ವ್ಯಾಪಾರಿಗಳು ಘನತೆಯಿಂದ ಬದುಕಲು ನೆರವಾಗಲು ಸರಕಾರವು ಪಿಂಚಣಿ ಯೋಜನೆಯನ್ನು ಆರಂಭಿಸಿದೆ ಎಂದರು.

ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಚುನಾವಣಾ ಆಯೋಗ,ಕೋಟ್ಯಂತರ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳನ್ನು ಅವರು ಅಭಿನಂದಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿದ ಅವರು,2024ರ ವೇಳೆಗೆ ಉನ್ನತ ಶಿಕ್ಷಣ ಸಂಸ್ಥೆಯಲ್ಲಿನ ಸೀಟುಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರವು ಶ್ರಮಿಸುತ್ತಿದೆ ಮತ್ತು ಎರಡು ಕೋಟಿ ಅಧಿಕ ಸಿಟುಗಳನ್ನು ಸೃಷ್ಟಿಸಲಿದೆ ಎಂದರು.

26 ಲಕ್ಷ ಬಡರೋಗಿಗಳು ಆಯುಷ್ಮಾನ್ ಭಾರತ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು 2022ರ ವೇಳೆಗೆ ಇನ್ನೂ 1.5 ಆರೋಗ್ಯ ಕೇಂದ್ರಗಳು ಆರಂಭಗೊಳ್ಳುವ ಸಾಧ್ಯತೆಯಿದೆ ಎಂದ ಅವರು,ಬಡವರನ್ನು ಸಬಲಗೊಳಿಸುವುದರಿಂದ ಮಾತ್ರ ಬಡತನ ನಿವಾರಣೆ ಸಾಧ್ಯ,ಹೀಗಾಗಿ ಸರಕಾರವು ಅವರಿಗೆ ವಸತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News