ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡಿಸಿದ ರವಿಶಂಕರ್ ಪ್ರಸಾದ್

Update: 2019-06-21 15:37 GMT

 ಹೊಸದಿಲ್ಲಿ,ಜೂ.21: ಸರಕಾರವು ಶುಕ್ರವಾರ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗಳ ನಡುವೆಯೇ ಲೋಕಸಭೆಯಲ್ಲಿ ಹೊಸದಾಗಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿತು. ಮಸೂದೆಯು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2019 ಮೋದಿ ಸರಕಾರವು ತನ್ನ ಎರಡನೇ ಅಧಿಕಾರಾವಧಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿರುವ ಮೊದಲ ಶಾಸನವಾಗಿದೆ. ಲಿಂಗ ಸಮಾನತೆ ಮತ್ತು ನ್ಯಾಯಕ್ಕಾಗಿ ಈ ಶಾಸನವು ಅತ್ಯಗತ್ಯವಾಗಿದೆ ಎಂದು ಮಸೂದೆಯನ್ನು ಮಂಡಿಸಿದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಒತ್ತಿಹೇಳಿದರು.

ಮತ ವಿಭಜನೆಯ ಬಳಿಕ ಮಸೂದೆಯನ್ನು ಮಂಡಿಸಿದ್ದು,186 ಸದಸ್ಯರು ಅದನ್ನು ಬೆಂಬಲಿಸಿದರೆ 74 ಸದಸ್ಯರು ವಿರೋಧಿಸಿದರು.

ಇದು ಧರ್ಮದ ಪ್ರಶ್ನೆಯಲ್ಲ,ಮಹಿಳೆಯರಿಗೆ ನ್ಯಾಯದ ಪ್ರಶ್ನೆ ಎಂದ ಪ್ರಸಾದ್,ದೇಶದಲ್ಲಿ ತ್ರಿವಳಿ ತಲಾಖ್‌ನ ಹಲವಾರು ಪ್ರಕರಣಗಳು ನಡೆದಿವೆ. ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ 200ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎನ್ನುವ ಮೂಲಕ ಮಸೂದೆ ಮಂಡನೆಯ ಅಗತ್ಯವನ್ನು ಸಮರ್ಥಿಸಿಕೊಂಡರು.

ಇದು ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ ಮತ್ತು ಅದರ ರಕ್ಷಣೆಗೆ ನಾವು ಬದ್ಧರಾಗಿದೇವೆ ಎಂದ ಅವರು, ಶಾಸನವನ್ನು ಮಾಡುವುದು ಸಂಸತ್ತಿನ ಕೆಲಸವಾಗಿದೆ ಮತ್ತು ಕಾನೂನನ್ನು ವ್ಯಾಖ್ಯಾನಿಸುವುದು ನ್ಯಾಯಾಲಯಗಳಿಗೆ ಬಿಟ್ಟ ವಿಷಯವಾಗಿದೆ ಎಂದರು.

ಮಸೂದೆಯನ್ನು ಮಂಡಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಸೂಚಿಸಿದ ಬೆನ್ನಿಗೇ ಹಲವಾರು ಪ್ರತಿಪಕ್ಷ ಸದಸ್ಯರು ಪ್ರತಿಭಟಿಸಲು ಎದ್ದು ನಿಂತಿದ್ದು,ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಬಿರ್ಲಾ ಅವಕಾಶ ನೀಡಿದರು.

                              

  ದಿಢೀರ್ ತ್ರಿವಳಿ ತಲಾಖ್ ಪದ್ಧತಿಗೆ ನಾನು ವಿರುದ್ಧವಾಗಿದ್ದೇನೆ. ಆದರೆ ನಾಗರಿಕ ಮತ್ತು ಕ್ರಿಮಿನಲ್ ಕಾನೂನುಗಳನ್ನು ಸಮನ್ವಯಗೊಳಿಸಿರುವ ಈ ಮಸೂದೆಯನ್ನು ಪ್ರತಿಭಟಿಸುತ್ತಿದ್ದೇನೆ. ಈ ಶಾಸನವು ಮುಸ್ಲಿಂ ಸಮುದಾಯವನ್ನು ಬೆಟ್ಟು ಮಾಡಿದೆ,ಆದರೆ ಪತ್ನಿಯರನ್ನು ತೊರೆಯುವದು ಆ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಪತ್ನಿಯರನ್ನು ತೊರೆಯುವ ಎಲ್ಲ ಪ್ರಕರಣಗಳಲ್ಲಿಯೂ ಅನ್ವಯವಾಗಬಲ್ಲ ಸಾರ್ವತ್ರಿಕ ಕಾನೂನು ಬೇಕು.

* ಶಶಿ ತರೂರ್,ಕಾಂಗ್ರೆಸ್ ಸಂಸದ

ಬಿಜೆಪಿ ಮುಸ್ಲಿಂ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಿದೆ. ಆದರೆ ಅದು ಕೇರಳದಲ್ಲಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವ ಹಿಂದೂ ಮಹಿಳೆಯರ ಹಕ್ಕುಗಳನ್ನು ವಿರೋಧಿಸುತ್ತಿದೆ. ತ್ರಿವಳಿ ತಲಾಖ್ ಮಸೂದೆಯು ತಪ್ಪಿತಸ್ಥ ಮುಸ್ಲಿಮರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಿದೆ,ಆದರೆ ಇದೇ ಅಪರಾಧಕ್ಕಾಗಿ ಮುಸ್ಲಿಮೇತರರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಹೀಗಾಗಿ ಈ ಮಸೂದೆಯು ಸಂವಿಧಾನ ವಿರೋಧಿಯಾಗಿದೆ.

* ಅಸದುದ್ದೀನ್ ಉವೈಸಿ,ಎಐಎಂಐಎಂ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News