ಗೂಡ್ಸ್, ಶಾಲಾ ವಾಹನಗಳ ಮೇಲೆ ನಿಗಾ: ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

Update: 2019-06-21 08:54 GMT

ಮಂಗಳೂರು, ಜೂ.21: ಸರಕು (ಗೂಡ್ಸ್) ಸಾಗಾಟದ ವಾಹನಗಳಲ್ಲಿ ಕಾರ್ಮಿಕರು, ಜನರನ್ನು ಸಾಗಿಸುವುದು ಹಾಗೂ ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸಾಗಿಸುವುದರ ಬಗ್ಗೆ ನಿಗಾ ಇರಿಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸಾರ್ವಜನಿಕರೊಂದಿಗೆ ಫೋನ್ ಇನ್ ಕಾರ್ಯಕ್ರಮದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕಳೆದ ಒಂದು ತಿಂಗಳಲ್ಲಿ ಸರಕು ಸಾಗಾಟ ವಾಹನಗಳಲ್ಲಿ ಜನರನ್ನು ಸಾಗಿಸುತ್ತಿರುವ 280 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇವೇಳೆ ಶಾಲಾ ವಾಹನಗಳಿಗೆ ಸಂಬಂಧಿಸಿ 60 ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಪ್ರಕರಣಗಳ ಬಗ್ಗೆ ಹೈಕೋರ್ಟ್‌ನಿಂದ ಸ್ಪಷ್ಟ ಸೂಚನೆಯೇ ಇರುವುದಲ್ಲದೆ, ಪ್ರಕರಣಗಳ ಕುರಿತಂತೆ ಇಲಾಖೆ ನಿಗಾ ಇರಿಸಿದೆ ಎಂದವರು ಹೇಳಿದರು.

ಇಂತಹ ಪ್ರಕರಣಗಳಿಗೆ ಸಂಬಂಧಿಸಿ ನೇರವಾಗಿ ಆರ್‌ಟಿಒ ಗಮನಕ್ಕೆ ತಂದು ಪರವಾನಿಗೆ ರದ್ದು ಪಡಿಸುವುದಲ್ಲದೆ, ವಾಹನದ ಪರ್ಮಿಟ್ ಕೂಡಾ ರದ್ದುಪಡಿಸಲಾಗುವುದು ಎಂದು ಅವರು ತಿಳಿಸಿದರು. ಮಹಿಳೆಯೊಬ್ಬರು ಕರೆ ಮಾಡಿ, ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಶಾಲಾ ವಾಹನದಲ್ಲಿ ಇದೀಗ ಮಕ್ಕಳನ್ನು ಕರೆದೊಯ್ಯಲು ವಾಹನ ಚಾಲಕ ಹಿಂಜರಿಯುತ್ತಿದ್ದಾರೆ. ಹಲವಾರು ವರ್ಷಗಳಿಂದ ಅವರು ಮಕ್ಕಳನ್ನು ಕೊಂಡೊಯ್ಯುತ್ತಿದ್ದು ಇದುವರೆಗೂ ಯಾವುದೇ ಅಪಾಯ ಸಂಭವಿಸಿಲ್ಲ. ಹಾಗಾಗಿ ಶಾಲಾ ವಾಹನಗಳಿಗೆ ಅಷ್ಟೊಂದು ಕಟ್ಟುನಿಟ್ಟು ಮಾಡಿದರೆ ವಾಹನದಲ್ಲಿ ದುಡಿಯುವವರಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಈವರೆಗೆ ಏನೂ ಆಗಿಲ್ಲ ಎಂದು ನಿಯಮ ಮೀರಿ ಮಕ್ಕಳನ್ನು ಸಾಗಿಸುವಂತಿಲ್ಲ. ನಿಯಮಾನುಸಾರ ಇಲ್ಲವಾದಲ್ಲಿ ಮಾತ್ರವೇ ಅಂತಹ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.

ಎಲ್ಲಾ ಮೀನು ಸಾಗಾಟ ವಾಹನಗಳಿಗೆ ಟ್ಯಾಂಕ್ ಅಳವಡಿಕೆ ಸೂಚನೆ

ಮೀನು ಸಾಗಾಟದ ವಾಹನಗಳಲ್ಲಿನ ನೀರು ರಸ್ತೆಯುದ್ದಕ್ಕೂ ಚೆಲ್ಲುತ್ತಿರುವುದರ ವಿರುದ್ಧ ನಿಗಾ ವಹಿಸಿರುವ ಪೊಲೀಸ್ ಇಲಾಖೆ ಈಗಾಗಲೇ ವಾಹನಗಳಿಗೆ ನೀರು ಸಂಗ್ರಹಕ್ಕೆ ಟ್ಯಾಂಕ್ ಅಳವಡಿಸಲು ಸೂಚಿಸಿದೆ. ಈಗಾಗಲೇ 63 ವಾಹನಗಳಲ್ಲಿ ಈ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಪ್ರಸಕ್ತ ಇರುವ ಮೀನುಗಾರಿಕೆ ಸ್ಥಗಿತ ಅವಧಿ ಮುಗಿಯುವುದರೊಳಗೆ ಎಲ್ಲಾ ವಾಹನಗಳೂ ಕಡ್ಡಾಯವಾಗಿ ಈ ಟ್ಯಾಂಕ್‌ಗಳನ್ನು ಅಳವಡಿಸಬೇಕಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಸಮಾಜ ಘಾತುಕ ಶಕ್ತಿಗಳ ನಿಗ್ರಹಕ್ಕೆ ಇನ್ನಷ್ಟು ಕ್ರಮ

 ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಪುಂಡ ಪೋಕರಿ, ಸಮಾಜ ಘಾತುಕ ಶಕ್ತಿಗಳಿಂದ ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯಿಂದ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಾರ್‌ಗಳಿಗೆ ರೈಡ್ ಮಾಡುವ ಕಾರ್ಯ ಆರಂಭವಾಗಿದೆ. ಇದು ಇನ್ನಷ್ಟು ಕಟ್ಟುನಿಟ್ಟಾಗಿ ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು.

ಆ ರೀತಿ ಏಕಾಏಕಿಯಾಗಿ ಬಾರ್‌ಗಳಿಗೆ ದಾಳಿ ನಡೆಸುವ ಮೂಲಕ ಸಭ್ಯತೆಯಿಂದ ಮದ್ಯ ಸೇವಿಸುವರ ಹಕ್ಕನ್ನು ಕಸಿದಂತಾಗುವುದಿಲ್ಲವೇ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಯಾವುದೇ ರೀತಿಯಲ್ಲಿ ಯಾರದ್ದೇ ಸ್ವಾತಂತ್ರಕ್ಕೆ ಧಕ್ಕೆ ತರುವ ಇರಾದೆ ಇಲಾಖೆಯದ್ದಲ್ಲ. ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಮಾತ್ರವೇ ಈ ದಾಳಿಯನ್ನು ನಡೆಸಲಾಗುತ್ತಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲೂ ಅಗತ್ಯವಾದರೆ ಇಂತಹ ದಾಳಿ ನಡೆಯಲಿದೆ. ಅದು ಕೇವಲ ಸಮಾಜ ಘಾತುಕರೆಂದು ಮಾಹಿತಿ ಇರುವ, ಗುರುತಿಸಿಕೊಂಡಿರುವವರಿಂದ ಸಮಾಜದ ರಕ್ಷಣೆಗಾಗಿ ಮಾತ್ರ. ಇದರಿಂದ ಯಾವುದೇ ರೀತಿಯಲ್ಲಿ ಸಭ್ಯ ನಾಗರಿಕರಿಗೆ ಅನ್ವಯವಾಗುವುದಿಲ್ಲ. ಬಾರ್‌ಗಳಿಗೆ ಕುಡಿಯಲು ಬರುವ ಸಂದರ್ಭದಲ್ಲಿ ಕೆಲವೊಂದು ಸಮಾಜ ಘಾತುಕರು ತಮ್ಮ ಜತೆ ಚೂರಿ, ಕತ್ತಿಯಂತಹ ಆಯುಧಗಳೊಂದಿಗೆ ಬಂದು ಸಣ್ಣಪುಟ್ಟ ವಿಷಯಗಳಿಗೆ ಗಲಾಟೆ ಮಾಡಿ ಚೂರಿಯಿಂದ ಇರಿಯುವಂತಹ ಪ್ರಕರಣಗಳು ನಡೆಯುತ್ತವೆ. ಇಂತಹದ್ದನ್ನು ತಪ್ಪಿಸಲು ಈ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News