ದಲಿತ ಕುಂದು ಕೊರತೆ ಸಭೆ: ತಹಶೀಲ್ದಾರ್ ಗೈರಿಗೆ ಮುಖಂಡರ ಆಕ್ರೋಶ, ಬಹಿಷ್ಕಾರ

Update: 2019-06-21 13:06 GMT

ಪುತ್ತೂರು: ತಾಲೂಕು ಮಟ್ಟದ ದಲಿತ ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಬೇಕಾಗಿದ್ದ ತಹಶೀಲ್ದಾರ್ ಅವರು ಗೈರು ಹಾಜರಾಗಿರುವುದಕ್ಕೆ ಅಕ್ರೊಶ ವ್ಯಕ್ತ ಪಡಿಸಿ ಉಪಸ್ಥಿತರಿದ್ದ ದಲಿತ ಮುಖಂಡರು ಬಹಿಷ್ಕರಿಸಿ ಹೊರ ನಡೆದ ಘಟನೆ ಶುಕ್ರವಾರ ಪುತ್ತೂರಿನಲ್ಲಿ ನಡೆಯಿತು.

ಕುಂದು ಕೊರತೆ ಸಭೆಯನ್ನು ಹಲವು ದಿನಗಳ ಹಿಂದೆಯೇ ನಿಗದಿಪಡಿಸಿ ಇಲಾಖೆ ಹಾಗೂ ದಲಿತ ಮುಖಂಡಿರಿಗೆ ನೋಟೀಸ್ ನೀಡಲಾಗಿತ್ತು. ಅದರಂತೆ ನೂರಕ್ಕೂ ಅಧಿಕ ದಲಿತ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸಿದ್ದರು. ಈ ನಡುವೆ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ಗುರುವಾರ ಸಂಜೆ ಲಂಚದ ಆರೋಪದಲ್ಲಿ ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಈ ಕಾರಣದಿಂದ ಉಪ ತಹಸೀಲ್ದಾರ್ ರಾಮಣ್ಣ ನಾಯ್ಕ್ ಅವರು ಸಭೆಗೆ ಆಗಮಿಸಿದ್ದರು. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಎಚ್. ಗಾಯತ್ರಿ, ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಉಪಸ್ಥಿತರಿದ್ದರು.

ಸಭೆ ಆರಂಭಿಸುತ್ತಿದ್ದಂತೆ ತಹಶೀಲ್ದಾರ್ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದ ಡಾ. ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಗಿರಿಧರ ನಾಯಕ್ ತಹಸೀಲ್ದಾರ್ ಇಲ್ಲದೆ ಸಭೆ ನಡೆಸಲು ಆಕ್ಷೇಪ ವ್ಯಕ್ತ ಪಡಿಸಿ ಸಹಾಯಕ ಕಮೀಷನರನ್ ಬಂದು ಸಭೆ ನಡೆಸಲಿ ಎಂದು ಪಟ್ಟು ಹಿಡಿದರು. ಬಳಿಕ ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ್ ಅವರು ಸಹಾಯಕ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಸಹಾಯಕ ಆಯುಕ್ತರು ಬೇರೆ ಕಾರ್ಯದಲ್ಲಿ ತತ್ಪರರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬರಲಾಗುತ್ತಿಲ್ಲ ಎಂಬುದನ್ನು ಸಭೆಯ ಗಮನಕ್ಕೆ ತಂದರು.

ಇದರಿಂದ ಆಕ್ರೋಶಿತರಾದ ಗಿರಿಧರ್ ನಾಯ್ಕ್ ತಹಶೀಲ್ದಾರ್ ಇಲ್ಲದಿದ್ದಲ್ಲಿ ಸಹಾಯಕ ಕಮೀಷನರ್ ಬಂದು ಸಭೆ ನಡೆಸಲಿ. ದಲಿತರ ಅಹವಾಲುಗಳಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಈ ಹಿಂದೆ ದಲಿತರ ಮೂಲಭೂತ ಸೌಕರ್ಯಗಳ ಬಗ್ಗೆ ಹಲವು ಸಲಹೆ ಸೂಚನೆ ನೀಡಿದ್ದರೂ ಯಾವುದೂ ಅನುಷ್ಠಾನಗೊಂಡಿಲ್ಲ. ಇಂತಹ ಕಾಟಾಚಾರದ ಸಭೆ ನಡೆಸುವ ಅಗತ್ಯವಿಲ್ಲ. ತಹಶೀಲ್ದಾರ್ ಗಿಂತ ಕೆಳಗಿನ ಅಧಿಕಾರಿಗಳು ಸಭೆ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಸಹಾಯಕ ಕಮೀಷನರ್ ಸಭೆಗೆ ಬರುವುದಿಲ್ಲದಿದ್ದಲ್ಲಿ ನಾವು ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.

ಇದಕ್ಕೆ ಸಭೆಯಲ್ಲಿದ್ದ ಇತರ ದಲಿತ ಮುಖಂಡರಾದ ಬಾಲಚಂದ್ರ ಸೊರಕೆ, ಸೇಸಪ್ಪ ನೆಕ್ಕಿಲು, ರಾಜು ಹೊಸ್ಮಠ, ಕೃಷ್ಣ ನಿಡ್ಪಳ್ಳಿ ಮತ್ತಿತರರು ಧ್ವನಿಗೂಡಿಸಿ ಎಲ್ಲರೂ ಸಭೆಯಿಂದ ಹೊರ ನಡೆದರು.

ದಲಿತ ಸಂಘಟನೆಗಳ ಮುಖಂಡರು ಸಭೆಯಿಂದ ಹೊರಡುತ್ತಿದ್ದಂತೆ ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ಜಗದೀಶ್ ಎಸ್. ಮಾತನಾಡಿ, ಇವತ್ತಿನ ಸಭೆಯನ್ನು ಮುಂದೂಡಲಾಗುವುದು ಹಾಗೂ ಘಟನಾವಳಿಗಳ ಬಗ್ಗೆ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಗುವುದು. ಮುಂದಿನ ಸಭೆಯನ್ನು ತಹಶೀಲ್ದಾರ್ ನಿರ್ಧರಿಸಿದ ತಕ್ಷಣ ತಿಳಿಸಲಾಗುವುದು ಎಂದರು.

ಸಭೆ ಮುಂದೂಡಲ್ಪಟ್ಟ ಮಾಹಿತಿಯನ್ನು ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಾಗ, ನಾವು ಸಭೆಗೆ ಬಂದಿರುವ ಕಾರಣ ನಮ್ಮ ಸಹಿ ಪಡೆದುಕೊಳ್ಳಿ ಎಂಬ ಆಗ್ರಹ ಅಧಿಕಾರಿಗಳ ಕಡೆಯಿಂದ ಬಂತು. ಉಪಸ್ಥಿತರಿದ್ದ ಅಧಿಕಾರಿಗಳ ಹಾಜರಾತಿ ಪಡೆದುಕೊಂಡು ಕಳುಹಿಸಿಕೊಡಲಾಯಿತು.

ಸಭೆಯಿಂದ ಹೊರ ನಡೆದ ದಲಿತ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು ತಾಪಂ ಕಚೇರಿ ಎದುರು ಜಮಾಯಿಸಿ ಆಡಳಿತ ಯಂತ್ರದ ವಿರುದ್ಧ ಘೋಷಣೆ ಕೂಗಿ ವಾಪಾಸಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News