ಎನ್‌ಆರ್‌ಸಿ ಕರಡಿನಿಂದ ಹೊರತುಪಡಿಸಲ್ಪಟ್ಟವರ ಹೆಚ್ಚುವರಿ ಪಟ್ಟಿ ಜೂನ್ 26ರಂದು ಪ್ರಕಟ

Update: 2019-06-21 18:06 GMT

ಗುವಾಹಟಿ, ಜೂ.21: ಕಳೆದ ವರ್ಷದ ಜುಲೈ 30ರಂದು ಪ್ರಕಟವಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಕರಡುಪ್ರತಿಯಲ್ಲಿ ಹೆಸರಿಸಲ್ಪಟ್ಟು,, ತರುವಾಯ ಸೇರ್ಪಡೆಗೆ ಅನರ್ಹರೆಂದು ಕಂಡುಬಂದವರ ಹೆಸರುಗಳನ್ನೊಳಗೊಂಡ ಹೆಚ್ಚುವರಿ ಪಟ್ಟಿಯೊಂದನ್ನು ಜೂನ್ 26ರಂದು ಪ್ರಕಟಿಸಲಾಗುವುದು.

ಪೌರತ್ವದ ದಾವೆ ಹಾಗೂ ಆಕ್ಷೇಪಗಳ ವಿಲೇವಾರಿಗಾಗಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಅನರ್ಹರೆಂದು ಪತ್ತೆಯಾದವರ ಹೆಸರುಗಳನ್ನು ಕೂಡಾ ಈ ಪಟ್ಟಿಯು ಒಳಗೊಂಡಿದೆಯೆಂದು ಶುಕ್ರವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಯ ಕರಡುಪಟ್ಟಿಯಿಂದ ಹೊರಗಿಡಲ್ಪಟ್ಟವರಿಗೆ ವೈಯಕ್ತಿಕವಾಗಿ ಅವರ ವಾಸ್ತವ್ಯದ ವಿಳಾಸಕ್ಕೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗುವುದು. ಇಂತಹ ವ್ಯಕ್ತಿಗಳಿಗೆ ಈ ವರ್ಷದ ಜುಲೈ 11ರೊಳಗೆ ನಿಯೋಜಿತ ಎನ್‌ಆರ್‌ಸಿ ಸೇವಾ ಕೇಂದ್ರ (ಎನ್‌ಎಸ್‌ಕೆ)ಗಳಲ್ಲಿ ತಮ್ಮ ದಾವೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ಜುಲೈ 31ರಂದು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪ್ರತಿ ಪ್ರಕಟವಾಗುವ ಮುನ್ನ ಅವರ ದಾವೆಗಳನ್ನು ಇತ್ಯರ್ಥ ಮಾಡಲಾಗುವುದು ಎಂದರು ಪತ್ರಿಕಾ ಹೇಳಿಕೆ ತಿಳಿಸಿದೆ.

ಎನ್‌ಆರ್‌ಸಿಯಿಂದ ಹೊರತುಪಡಿಸಲ್ಪಟ್ಟವರ ಪಟ್ಟಿಯನ್ನು ಎನ್‌ಆರ್‌ಸಿ ಸೇವಾಕೇಂದ್ರದಲ್ಲಿ,ಉಪ ಆಯುಕ್ತರು/ ಎಸ್‌ಡಿಓ(ಸಿವಿಲ್/ವೃತ್ತ ಅಧಿಕಾರಿ) ಅವರ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಆನ್‌ಲೈನ್‌ನಲ್ಲಿ ಈ ಪಟ್ಟಿ ಲಭ್ಯವಿರುವುದು.

ಕಳೆದ ವರ್ಷ ಜುಲೈ 30ರಂದು ರಾಷ್ಟ್ರೀಯ ನೋಂದಣಿ ಕರಡನ್ನು ಪ್ರಕಟಿಸಲಾಗಿದ್ದು, ನೋಂದಣಿ ಕೋರಿ ಸಲ್ಲಿಸಲಾದ ಒಟ್ಟು 3.29 ಕೋಟಿ ಅರ್ಜಿಗಳಲ್ಲಿ 2.9 ಕೋಟಿ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಸುಮಾರು 40 ಲಕ್ಷ ಮಂದಿಯ ಹೆಸರುಗಳನ್ನು ಎನ್‌ಆರ್‌ಸಿ ಕರಡಿನಿಂದ ಕೈಬಿಡಲಾಗಿತ್ತು. ಡಿಸೆಂಬರ್31ರಂದು ಪ್ರಕಟವಾದ ಮೊದಲ ಎನ್‌ಆರ್‌ಸಿ ಕರಡು 1.9 ಕೋಟಿ ಮಂದಿಯ ಹೆಸರುಗಳನ್ನು ಒಳಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News