ಸಂಜೀವ್ ಭಟ್ ಸೇಡಿನ ರಾಜಕೀಯದ ಬಲಿಪಶು: ಮುಹಮ್ಮದ್ ಅಲಿ ಜಿನ್ನಾ

Update: 2019-06-22 07:10 GMT

ಮಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು, ಅವರ ವಿರುದ್ಧದ ರಾಜಕೀಯ ಸೇಡಿನ ಫಲಿತಾಂಶವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ.

ಸಂಜೀವ್ ಭಟ್ 2011ರಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅಫಿದಾವಿತ್ ವೊಂದರಲ್ಲಿ, ತಾನು ಗುಜರಾತ್ ಗುಪ್ತಚರ ಇಲಾಖೆಯ ಗುಪ್ತಚರ ಸಹಾಯಕ ಆಯುಕ್ತನಾಗಿ ಕರ್ತವ್ಯದಲ್ಲಿದ್ದ ವೇಳೆ ನಡೆದ ಗೋಧ್ರಾ ರೈಲು ದುರಂತದ ಬಳಿಕ, ಹಿಂದೂಗಳಿಗೆ ಮುಸ್ಲಿಮರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ಅನುಮತಿಸಿ ಎಂದು ಮುಖ್ಯಮಂತ್ರಿಯವರು ರಾಜ್ಯದ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದ್ದರು. ಹಿಂಸೆಯನ್ನು ಪ್ರಚೋದಿಸಲು ಮತ್ತು ಕಾಂಗ್ರೆಸ್ ನಾಯಕ ಇಹ್ಸಾನ್ ಜಾಫ್ರಿಯವರ ಪ್ರಾಣಾಪಾಯದ ಕುರಿತ ಭೀತಿಯನ್ನೂ ರಾಜ್ಯ ಸರಕಾರವು ಉಪೇಕ್ಷಿಸಿತ್ತು ಎಂಬುದಾಗಿಯೂ ವಾದಿಸಿದ್ದರು. ಸಂಜೀವ್ ಭಟ್ ಅವರು, ಕೋಮು ಹತ್ಯಾಕಾಂಡದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂಲಕ ನಿಯೋಜಿಸಲಾಗಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಮುಂದೆ, ಒಂದು ದೊಡ್ಡ ಪಿತೂರಿಯನ್ನು ಮುಚ್ಚಿ ಹಾಕುವ ಕುರಿತಂತೆಯೂ ಆರೋಪ ಹೊರಿಸಿದ್ದರು.

ಸಂಜೀವ್ ಭಟ್ ಅವರು ತಾನು ತಳೆದ ದಿಟ್ಟ ಮತ್ತು ಉದಾತ್ತ ತತ್ವಗಳಿಗಾಗಿ ಭಾರೀ ಬೆಲೆಯನ್ನು ತೆರುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರನ್ನು ಮೊದಲು ಅಮಾನತುಗೊಳಿಸಲಾಯಿತು, ನಂತರ ನೌಕರಿಯಿಂದ ತೆಗೆದುಹಾಕಲಾಯಿತು. 2011ರಲ್ಲಿ ಅವರ ಬಂಧನವಾಯಿತು ಮತ್ತು ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರು. ಗುಜರಾತ್ ಸರಕಾರವು ಅವರ ಜಾಮೀನಿನ ಕುರಿತು ಅಕ್ಷೇಪ ವ್ಯಕ್ತಪಡಿಸುತ್ತಾ ಅವರನ್ನು ಜೈಲುಗಂಬಿಗಳ ಹಿಂದೆ ಇಡಲು ಪ್ರಯತ್ನಿಸಿತು. 2014ರ ಸೆಪ್ಟಂಬರ್ ನಲ್ಲಿ ಅವರನ್ನು 1996ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಮತ್ತೆ ಬಂಧಿಸಲಾಯಿತು ಮತ್ತು ಅಂದಿನಿಂದ ಅವರು ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಇದೀಗ ಗುಜರಾತ್ ನ  ಜಾಮ್ ನಗರದ ಕೆಳ ನ್ಯಾಯಾಲಯವು, ಕಸ್ಟಡಿ ಸಾವಿಗೆ ಸಂಬಂಧಿಸಿ ವಿಧಿಸಿರುವ ಜೀವಾವಧಿ ಶಿಕ್ಷೆಯು 1990ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಆ ವೇಳೆ ಅವರು ಜಾಮ್ ನಗರದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದರು. ಈ ಎಲ್ಲಾ ಕಾರಣಗಳನ್ನು ಗಮನಿಸಿದರೆ, ತಮ್ಮ ಕೋಮುವಾದಿ ಅಜೆಂಡಾಗಳಿಗೆ ಬೆದರಿಕೆ ಎಂದು ಅರಿತಿರುವ ಕೆಲವು ಶಕ್ತಿಶಾಲಿ ವ್ಯಕ್ತಿಗಳು ಅವರನ್ನು ಗುರಿಪಡಿಸುತ್ತಿದ್ದಾರೆ ಎಂದು ಭಾವಿಸಬಹುದಾಗಿದೆ.

ಈ ರೀತಿಯ ಕಾರ್ಯಾಚರಣೆಗಳ ಕುರಿತಂತೆ ಮೌನ ವಹಿಸುವುದರಿಂದ ಈಗಾಗಲೇ ದೇಶದಲ್ಲಿ ಬಲಿಷ್ಠವಾಗಿರುವ ಸರ್ವಾಧಿಕಾರಕ್ಕೆ ನೆರವು ನೀಡಿದಂತಾಗುತ್ತದೆ ಎಂದು ಮುಹಮ್ಮದ್ ಅಲಿ ಜಿನ್ನಾ ತಿಳಿಸಿದ್ದಾರೆ.

ನಾಗರಿಕ ಸಮಾಜ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಎಚ್ಚರವಾಗಿರಬೇಕು ಮತ್ತು ನ್ಯಾಯದ ಹೋರಾಟದಲ್ಲಿ ಸಂಜೀವ್ ಭಟ್ ಅವರ ಜೊತೆ ನಿಲ್ಲಲು ಜಿನ್ನಾ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News