ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ: ದೇವಳ ವ್ಯವಸ್ಥಾಪನಾ ಸಮಿತಿಗೆ ಅಭಿನಂದನಾ ಕಾರ್ಯಕ್ರಮ

Update: 2019-06-22 12:39 GMT

ಪುತ್ತೂರು: ದೇವಾಲಯದ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿ ಇದೇ ಜೂ.23ರಂದು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ದೇವಳದ ವಠಾರದಲ್ಲಿ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪನಾ ಸಮಿತಿಯ ನಿರ್ಗಮನ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು  ಮೂರು ವರ್ಷಗಳ ಕಾಲ ದೇವಾಲಯದಲ್ಲಿ ಉದ್ದೇಶಿತ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿರುತ್ತೇನೆ. ಅಧಿಕಾರ ಅವಧಿಯಲ್ಲಿ ದೇವರ ಅನುಗ್ರಹ, ಸಿಬಂದಿಗಳ ಸಹಕಾರ ಹಾಗೂ ಭಕ್ತರ ಪ್ರೊತ್ಸಾಹದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಹೇಳಿದರು. 

ನಾನು ಕಳೆದ 50 ವರ್ಷಗಳಿಂದ ಪ್ರತಿದಿನ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಭೇಟಿ ನೀಡುತ್ತಿದ್ದು. ದೇವರು ಮೂರು ವರ್ಷ ದೇವಾಲಯದ ಆಡಳಿತ ನಡೆಸಿ ದೇವಾಲಯದಲ್ಲಿ ರಾಜಗೋಪುರ, ಸ್ವರ್ಣಕವಚದ ಕೊಡಿಮರ, ನೂತನ ಹೂತೇರು ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು ಎಂದರು. 

ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಲ್ಲೇಗ ಸಂಜೀವ ನಾಯಕ್, ನಯನಾ ವಿ. ರೈ ಮಾತನಾಡಿದರು.  ದೇವಾಲಯದ ಮುಖ್ಯ ಗುಮಾಸ್ತ ಜಗದೀಶ್ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸದಸ್ಯರಾದ ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ಕರುಣಾಕರ ರೈ, ಕಲ್ಲೇಗ ಸಂಜೀವ ನಾಯಕ್, ವಸಂತಕೃಷ್ಣ ಕೆದಿಲಾಯ, ರೋಹಿಣಿ ಆಚಾರ್ಯ ಹಾಗೂ ನಯನಾ ರೈ ಅವರಿಗೆ ನೌಕರ ವೃಂದದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಿರ್ಗಮನ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ದೇವಾಲಯದ ಅರ್ಚಕ ವೃಂದ ಹಾಗೂ ಎಲ್ಲಾ ಸಿಬಂದಿ ವರ್ಗಕ್ಕೆ  ಮಹಾಲಿಂಗೇಶ್ವರ ದೇವರ ಬೆಳ್ಳಿಯ ಮೂರ್ತಿ ಸ್ಮರಣಿಕೆಯಾಗಿ ನೀಡಿದರು. 

ವೇ.ಮೂ. ಜಯರಾಮ ಜೋಯಿಸ, ವೇ.ಮೂ. ಉದಯ ಶಂಕರ ಭಟ್, ವೈದಿಕ ಪ್ರಾರ್ಥನೆ ನೆರವೇರಿಸಿದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್ ಸ್ವಾಗತಿಸಿದರು. ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News