ಮೋದಿಯನ್ನು 'ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕ' ಎಂದು ಆಯ್ಕೆ ಮಾಡಿದ ಮ್ಯಾಗಝಿನ್ ಯಾವುದು ಗೊತ್ತೇ?

Update: 2019-06-22 18:17 GMT

ಮ್ಯಾಗಝಿನ್ ಒಂದು ನಡೆಸಿದ ‘ಓದುಗರ ಆಯ್ಕೆ’ಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯನ್ನು ಶೇರ್ ಮಾಡುತ್ತಿರುವವರಲ್ಲಿ ಹೆಚ್ಚಿನವರು ಬಿಜೆಪಿ ನಾಯಕರು ಮತ್ತು ಬೆಂಬಲಿಗರು. ಇವರ ಜೊತೆಗೆ ಝೀನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್ ತಕ್ ಸೇರಿದಂತೆ ಕೆಲ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸುತ್ತಾ ‘ಸಂಭ್ರಮಾಚರಣೆ’ ನಡೆಸುತ್ತಿದೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಈ ಸುದ್ದಿಯನ್ನು ಟ್ವೀಟ್ ಮಾಡಿ, ಮೋದಿ ಭಾರತದ ‘ಸರ್ವೋಚ್ಛ ನಾಯಕ’ ಎಂದು ಬಣ್ಣಿಸಿದ್ದರು. ಈ ಬಗ್ಗೆ ವರದಿ ಪ್ರಕಟಿಸಿದ್ದ ಝೀ ನ್ಯೂಸ್ ‘ಬ್ರಿಟಿಷ್ ಹೆರಾಲ್ಡ್’ ಅನ್ನು ಪ್ರತಿಷ್ಠಿತ ಮ್ಯಾಗಝಿನ್ ಎಂದಿತ್ತಲ್ಲದೆ, “ಮೋದಿಯವರ ಜಾಗತಿಕ ಇಮೇಜ್ ಗೆ ಇದು ಮತ್ತೊಂದು ಉದಾಹರಣೆ” ಎಂದು ಬಣ್ಣಿಸಿತ್ತು.

ಆದರೆ ಯಾರೂ ಕೇಳಿರದ ‘ಬ್ರಿಟಿಷ್ ಹೆರಾಲ್ಡ್’ ಮ್ಯಾಗಝಿನ್ ನ ಹಿನ್ನೆಲೆಯೇನು?, ಅದನ್ನು ನಡೆಸುತ್ತಿರುವವರು ಯಾರು ಎನ್ನುವುದನ್ನು altnews.in ಕಂಡುಕೊಂಡಿದೆ.

‘ಬ್ರಿಟಿಷ್ ಹೆರಾಲ್ಡ್’ ಮಾಲಕರು ಯಾರು?

 www.britishherald.com ಎನ್ನುವ ಈ ವೆಬ್ ಸೈಟ್ ನ ಲೋಯೋಗದಲ್ಲಿ ವಯಾ ರಾಯ್ಟರ್ಸ್ ಎಂದು ಬರೆಯಲಾಗಿದೆ. ಬ್ರಿಟನ್ ನಲ್ಲಿ ರಿಜಿಸ್ಟರ್ ಆಗಿರುವ ಹೆರಾಲ್ಡ್ ಮೀಡಿಯಾ ನೆಟ್ ವರ್ಕ್ ಲಿ. ಈ ವೆಬ್ ಸೈಟ್ ನ ಮಾಲಕತ್ವವನ್ನು ಹೊಂದಿದೆ. ಭಾರತೀಯ ಪೌರ ಅನ್ಸಿಫ್ ಅಶ್ರಫ್ ಎಂಬವರು ಈ ಸಂಸ್ಥೆಯ 85 ಶೇ. ಶೇರುಗಳನ್ನು ಹೊಂದಿದ್ದಾರೆ. ಅಶ್ರಫ್ ಹೊರತಾಗಿ ಮತ್ತೋರ್ವ ನಿರ್ದೇಶಕನೆಂದರೆ ಅಹ್ಮದ್ ಶಂಶೀರ್ ಕೊಲಿಯಾಡ್ ಶಂಸುದ್ದೀನ್. ಅನ್ಸಿಫ್ ಅಶ್ರಫ್ ರ ವಿಕಿಪೀಡಿಯಾ ಪೇಜ್ ಅವರನ್ನು ಕೇರಳದ ಉದ್ಯಮಿ ಎಂದು ವಿವರಿಸುತ್ತದೆ ಮತ್ತು ಇದೇ ವ್ಯಕ್ತಿ ಕೊಚ್ಚಿನ್ ಹೆರಾಲ್ಡ್ ನ ಪ್ರಧಾನ ಸಂಪಾದಕ ಎಂದೂ ವಿಕಿಪಿಡಿಯಾ ಪೇಜ್ ನಲ್ಲಿ ಹೇಳಲಾಗಿದೆ.

ಪ್ರತಿಷ್ಠಿತ ಮ್ಯಾಗಝಿನ್ ಹೌದೇ?

ಭಾರತದ ಮಾಧ್ಯಮಗಳು ಬಣ್ಣಿಸಿದಂತೆ ಬ್ರಿಟಿಷ್ ಹೆರಾಲ್ಡ್ ಪ್ರತಿಷ್ಠಿತ ಮ್ಯಾಗಝಿನ್ ಹೌದೇ ಎನ್ನುವ ಪ್ರಶ್ನೆಗೆ ಉತ್ತರಗಳು ಇಲ್ಲಿವೆ..

1.ವೆಬ್ ಸೈಟ್ ಗಳ ರ್ಯಾಕಿಂಗ್ ತಿಳಿಸುವ ಗ್ಲೋಬಲ್ ಅಲೆಕ್ಸಾ ವೆಬ್ ಟ್ರಾಫಿಕ್ ನಲ್ಲಿ ಬ್ರಿಟಿಷ್ ಹೆರಾಲ್ಡ್ 28,518ನೆ ರ‌್ಯಾಂಕ್ ನಲ್ಲಿದೆ. ಇದಕ್ಕೆ ಹೋಲಿಸಿದರೆ indiatimes.com 190ನೆ ಮತ್ತು ಎನ್ ಡಿಟಿವಿ 395ನೆ ರ‌್ಯಾಂಕ್ ನಲ್ಲಿದೆ.

2.ಬ್ರಿಟಿಷ್ ಹೆರಾಲ್ಡ್ ಟ್ವಿಟರ್ ಖಾತೆಗೆ ಕೇವಲ 4 ಸಾವಿರ ಫಾಲೋವರ್ ಗಳಿದ್ದಾರೆ. ಆಲ್ಟ್ ನ್ಯೂಸ್ ಟ್ವಿಟರ್ ಖಾತೆಗೆ 1,20,000ಗಿಂತ ಹೆಚ್ಚು ಫಾಲೋವರ್ ಗಳಿದ್ದಾರೆ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ ಮತ್ತು ದ ಗಾರ್ಡಿಯನ್ ಗೆ ಮಿಲಿಯಗಟ್ಟಲೆ ಫಾಲೋವರ್ ಗಳಿದ್ದಾರೆ.

3.ಬ್ರಿಟಿಷ್ ಹೆರಾಲ್ಡ್ ಫೇಸ್ ಬುಕ್ ಪೇಜ್ ಗೆ 57 ಸಾವಿರ ಫಾಲೋವರ್ ಗಳಿದ್ದಾರೆ. ಬಿಬಿಸಿಯ ಫೇಸ್ ಬುಕ್ ಪೇಜ್ ಗೆ 48 ಮಿಲಿಯನ್ ಫಾಲೋವರ್ ಗಳಿದ್ದಾರೆ.

4.ಇಷ್ಟೇ ಅಲ್ಲದೆ ಭಾರತದ ಮಾಧ್ಯಮಗಳು ‘ಪ್ರತಿಷ್ಠಿತ’ ಎನ್ನುವ ಈ ಬ್ರಿಟಿಷ್ ಹೆರಾಲ್ಡ್ ಗೆ ವಿಕಿಪೀಡಿಯಾ ಪೇಜ್ ಕೂಡ ಇಲ್ಲ!.

5.ಮೋದಿ ಜಾಗತಿಕ ಶಕ್ತಿಶಾಲಿ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಯಾವೊಂದೂ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿಲ್ಲ. ವರದಿ ಮಾಡಿದ್ದು ಕೆಲ ಭಾರತೀಯ ಮಾಧ್ಯಮಗಳು ಮಾತ್ರ..

6.ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಘೋಷಿಸಿರುವ ಮ್ಯಾಗಝಿನ್ ಕವರ್ ಪೇಜ್ ನ ಚಿತ್ರವನ್ನು ಬ್ರಿಟಿಷ್ ಹೆರಾಲ್ಡ್ ವೋಟಿಂಗ್ ಮುಗಿಯುವ ಒಂದು ತಿಂಗಳ ಮೊದಲೇ ಟ್ವೀಟ್ ಮಾಡಲಾಗಿತ್ತು.

ಬಿಜೆಪಿ ನಾಯಕ ಹರ್ಷೋದ್ಗಾರ, ಮಾಧ್ಯಮಗಳ ಸಂಭ್ರಮಾಚರಣೆ!

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಈ ವಿಜಯ 130 ಕೋಟಿ ಭಾರತೀಯರಿಗೆ ಸಂದ ಗೌರವ ಎಂದಿದ್ದರು. ಇದೇ ರೀತಿ ಹಲವು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರು ಮಾತ್ರವಲ್ಲದೆ, ರಿಪಬ್ಲಿಕ್ ಟಿವಿಯಂತಹ ಕೆಲ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಪ್ರಕಟಿಸಿ ‘ಸಂಭ್ರಮಾಚರಣೆ’ ನಡೆಸಿದೆ.

ಒಟ್ಟಿನಲ್ಲಿ ಯಾರಿಗೂ ಗೊತ್ತಿಲ್ಲದ ಮ್ಯಾಗಝಿನ್ ಒಂದರ ಸಮೀಕ್ಷೆಯನ್ನು ಸಾಧನೆ ಎಂಬಂತೆ ಬಿಜೆಪಿ ನಾಯಕರು ಮಾತ್ರವಲ್ಲದೆ, ದೇಶದ ಮಾಧ್ಯಮಗಳು ಸಂಭ್ರಮಿಸುತ್ತಿರುವುದು ಮತ್ತು ಆ ಮ್ಯಾಗಝಿನ್ ನ ಹಿನ್ನೆಲೆಯನ್ನೇ ಅರಿಯದೆ ‘ಪ್ರತಿಷ್ಠಿತ’ ಎಂಬ ಬಿರುದು ನೀಡುವುದು ವಿಪರ್ಯಾಸವೇ ಸರಿ…

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News