ಕೇಸರಿ ಸಂಘಟನೆಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿ: ಅಮೆರಿಕದ ವರದಿಗೆ ಭಾರತದ ಪ್ರತಿಕ್ರಿಯೆ
ಹೊಸದಿಲ್ಲಿ,ಜೂ.23: ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತು ಅಮೆರಿಕದ ವರದಿಯನ್ನು ಭಾರತವು ರವಿವಾರ ತಿರಸ್ಕರಿಸಿದೆ. ತನ್ನ ಪ್ರಜೆಗಳ ಸಂವಿಧಾನಾತ್ಮಕ ಹಕ್ಕುಗಳ ಸ್ಥಿತಿಯ ಕುರಿತು ಮಾತನಾಡಲು ವಿದೇಶಿ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಗೋವುಗಳನ್ನು ಮಾರಾಟ ಮಾಡಿದ್ದಾರೆ ಅಥವಾ ಮಾಂಸಕ್ಕಾಗಿ ಅವುಗಳನ್ನು ಕೊಂದಿದ್ದಾರೆ ಎಂಬ ವದಂತಿಗಳ ನಡುವೆ ಹಿಂಸಾತ್ಮಕ ತೀವ್ರಗಾಮಿ ಹಿಂದು ಗುಂಪುಗಳಿಂದ ಅಲ್ಪಸಂಖ್ಯಾತ ಸಮುದಾಯಗಳ,ನಿರ್ದಿಷ್ಟವಾಗಿ ಮುಸ್ಲಿಮರ ವಿರುದ್ಧ ಗುಂಪು ದಾಳಿಗಳು 2018ರಲ್ಲಿಯೂ ಮುಂದುವರಿದಿದ್ದವು ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಶುಕ್ರವಾರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತು ತನ್ನ 2018ರ ವಾರ್ಷಿಕ ವರದಿಯಲ್ಲಿ ಆರೋಪಿಸಿತ್ತು.
ವರದಿಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ ಅವರು,ಭಾರತಕ್ಕೆ ತನ್ನ ಜಾತ್ಯತೀತ ತತ್ವಗಳು,ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ತನ್ನ ಸ್ಥಾನಮಾನ ಮತ್ತು ತನ್ನ ಬಹುತ್ವ ಸಮಾಜದ ಬಗ್ಗೆ ಹೆಮ್ಮೆಯಿದೆ. ಸಹಿಷ್ಣುತೆ ಮತ್ತು ಒಳಗೊಳ್ಳುವಿಕೆಗೆ ದೀರ್ಘಕಾಲಿಕ ಬದ್ಧತೆಯನ್ನು ಅದು ಹೊಂದಿದೆ ಎಂದು ಹೇಳಿದರು.
ಭಾರತೀಯ ಸಂವಿಧಾನವು ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ತನ್ನೆಲ್ಲ ಪ್ರಜೆಗಳಿಗೂ ಮೂಲಭೂತ ಹಕ್ಕುಗಳ ಖಾತರಿಯನ್ನು ನೀಡಿದೆ ಎಂದರು.
ಭಾರತವು ಒಂದು ಸ್ಪಂದನಶೀಲ ಪ್ರಜಾಪ್ರಭುತ್ವವಾಗಿದೆ ಎನ್ನುವುದನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಇಲ್ಲಿ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯಕ್ಕೆ ರಕ್ಷಣೆಯನ್ನೊದಗಿಸಿದೆ ಹಾಗೂ ಪ್ರಜಾಸತ್ತಾತ್ಮಕ ಮತ್ತು ಕಾನೂನಿನ ಆಡಳಿತವು ಮೂಲಭೂತ ಹಕ್ಕುಗಳಿಗೆ ಇನ್ನಷ್ಟು ಉತ್ತೇಜನ ಮತ್ತು ರಕ್ಷಣೆಯನ್ನು ನೀಡುತ್ತಿದೆ ಎಂದು ಕುಮಾರ ಒತ್ತಿ ಹೇಳಿದರು.
ಸಂವಿಧಾನದಿಂದ ರಕ್ಷಿತ ನಮ್ಮ ನಾಗರಿಕರ ಹಕ್ಕುಗಳ ಸ್ಥಿತಿಯ ಕುರಿತು ಮಾತನಾಡಲು ಯಾವುದೇ ವಿದೇಶಿ ಸಂಸ್ಥೆ ಅಥವಾ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದರು.