ಬಾಲಕಿಯ ಚಿಕಿತ್ಸೆಗೆ 30 ಲಕ್ಷ ರೂ. ಮಂಜೂರು ಮಾಡಿದ ಪ್ರಧಾನಿ ಮೋದಿ

Update: 2019-06-23 08:22 GMT

ಆಗ್ರಾ, ಜೂ.23: ಇಪ್ಲಾಸ್ಟಿಕ್ ಅನೀಮಿಯಾ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಪ್ರಧಾನಿ ನರೇಂದ್ರ ಮೋದಿ 30 ಲಕ್ಷ ರೂಪಾಯಿಗಳ ನೆರವು ಮಂಜೂರು ಮಾಡಿದ್ದಾರೆ. ಬಾಲಕಿಯ ತಂದೆ ನೆರವು ಕೋರಿ ಬರೆದ ಪತ್ರಕ್ಕೆ ಸ್ಪಂದಿಸಿದ ಮೋದಿ ಈ ನೆರವು ಘೋಷಿಸಿದ್ದಾರೆ.

"ನನ್ನ ಪುತ್ರಿಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಬೇಕು ಎಂದು ಕೋರುತ್ತೇನೆ. ನಾನು ನನ್ನ ಜಮೀನು ಮಾರಾಟ ಮಾಡಿದ್ದು, ಮನೆಯನ್ನು ಒತ್ತೆ ಒಟ್ಟಿದ್ದೇನೆ. ಆಕೆಯ ಚಿಕಿತ್ಸೆಗಾಗಿ 7 ಲಕ್ಷ ರೂಪಾಯಿಯನ್ನು ಈಗಾಗಲೇ ವೆಚ್ಚ ಮಾಡಿದ್ದೇನೆ. ಆಕೆಯ ಕಾಯಿಲೆ ಗುಣಪಡಿಸಲಾಗದಿದ್ದರೆ ನಾನು ಸಾಯುತ್ತೇನೆ" ಎಂದು ಸುಮೇರ್ ಸಿಂಗ್ ಪತ್ರ ಬರೆದಿದ್ದರು.

ಸಿಂಗ್ ಅವರ ಮನವಿಗೆ ಸ್ಪಂದಿಸಿದ ಮೋದಿ ಕಚೇರಿ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ನೆರವು ಮಂಜೂರು ಮಾಡಿದೆ. "ಬಾಲಕಿ ಉಳಿಯಬೇಕಾದರೆ ಸಹೋದರನ ಅಸ್ಥಿಮಜ್ಜೆಯನ್ನು ಆಕೆಗೆ ಕಸಿ ಮಾಡಬೇಕು ಎಂದು ಜೈಪುರದ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಏಕೆಂದರೆ ಬಾಲಕಿಯ ಅಸ್ಥಿಮಜ್ಜೆ ಈಗಾಗಲೇ ನಿಷ್ಪ್ರಯೋಜಕವಾಗಿದೆ. ಕೇವಲ ಶಸ್ತ್ರಚಿಕಿತ್ಸೆಗೇ 10 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ" ಎಂದು ಸಿಂಗ್ ವಿವರಿಸಿದ್ದರು.

ಇಪ್ಲಾಸ್ಟಿಕ್ ಅನೀಮಿಯಾ ಕಾಯಿಲೆಯಲ್ಲಿ ದೇಹವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದನ್ನು ನಿಲ್ಲಿಸುವುದಲ್ಲದೇ, ಸೋಂಕು ಮತ್ತು ರಕ್ತಸ್ರಾವದ ಸಾಧ್ಯತೆಯನ್ನೂ ಅಧಿಕಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News