'ಜೈಶ್ರೀರಾಂ' ಹೇಳುವಂತೆ ಮುಸ್ಲಿಮರಿಗೆ ಬಲವಂತ: ಪ್ರಮುಖ ಆರೋಪಿಯ ಬಂಧನ

Update: 2019-06-23 08:46 GMT

ಗುವಾಹತಿ, ಜೂ.23: ಮುಸ್ಲಿಮರನ್ನು ಬಲವಂತವಾಗಿ ಜೈಶ್ರೀರಾಂ ಹೇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಅಸ್ಸಾಂನ ಬರ್ಪೇಟಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.

"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಜಿತ್ ದೇಕಾ ಎಂಬಾತನನ್ನು ಬಂಧಿಸಲಾಗಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 295ಎ, 120ಬಿ, 153ಎ ಹಾಗೂ 325ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ವಿಧಿಗಳು ಪ್ರಮುಖವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವುದು, ಅಪರಾಧ ಪಿತೂರಿ ಹಾಗೂ ದ್ವೇಷಕ್ಕೆ ಕುಮ್ಮಕ್ಕು ನೀಡುವುದು ಮತ್ತು ಘಾಸಿಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿವೆ" ಎಂದು ಎಸ್ಪಿ ರಾಬಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗುವಾಹತಿ ನಿವಾಸಿ ದೇಕಾ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದ. "ಬರ್ಪೇಟದ ರಾಮಸೈನಿಕರು, ಪಾಕಿಸ್ತಾನಿ ಜಿಂದಾಬಾದ್ ಹೇಳುತ್ತಿದ್ದ ಕೆಲ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ದೇಕಾ ಈ ವಿಡಿಯೊ ಅಪ್‍ಲೋಡ್ ಮಾಡಿದ್ದ. ಗುಂಪಿನ ಮೇಲೆ ಹಲ್ಲೆ ನಡೆಸಿದಾಗ ದೇಕಾ ಅಲ್ಲಿದ್ದನೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ರಾತ್ರಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅಟೊರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕರನ್ನು ತಡೆದು, ಜೈಶ್ರೀರಾಂ ಮತ್ತು ಭಾರತ್‍ ಮಾತಾಕಿ ಜೈ ಎಂಬ ಘೋಷಣೆಯನ್ನು ಅವರಿಂದ ಬಲಾತ್ಕಾರವಾಗಿ ಕೂಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News