ಮಾತುಕತೆಗೆ ಹುರಿಯತ್ ನಾಯಕರು ಸಿದ್ಧವಾಗಿದ್ದಾರೆ: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2019-06-23 15:21 GMT

 ಶ್ರೀನಗರ,ಜೂ.23: ಜಮ್ಮು-ಕಾಶ್ಮೀರದಲ್ಲಿನ ಸ್ಥಿತಿಯಲ್ಲಿ ಈಗ ಬಹಳಷ್ಟು ಸುಧಾರಣೆಯಾಗಿದೆ ಮತ್ತು ಹುರಿಯತ್ ಮಾತುಕತೆಗಳಿಗೆ ಸಿದ್ಧವಾಗಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ.

 ಶನಿವಾರ ಶ್ರೀನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ಈಗ ‘ಕಾವು ಕಡಿಮೆಯಾಗಿದೆ ’ಎಂದು ಘೋಷಿಸಿದರು. ಈ ಸಂದರ್ಭ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್ ಮತ್ತು ಜಿತೇಂದ್ರ ಸಿಂಗ್ ಅವರು ಉಪಸ್ಥಿತರಿದ್ದರು.

‘‘ನಾನು ಇಲ್ಲಿಗೆ ಬಂದಾಗ ಇದ್ದ ಸ್ಥಿತಿಗಿಂತ ಈಗ ಸ್ಥಿತಿಯು ಉತ್ತಮಗೊಂಡಿದೆ. ಹುರಿಯತ್‌ನಲ್ಲಿ ಆಗಿರುವ ಬದಲಾವಣೆಯನ್ನು ನಾವು ಗಮನಿಸಬಹುದಾಗಿದೆ. ಹಿಂದೆ ರಾಮವಿಲಾಸ್ ಪಾಸ್ವಾನ್ ಅವರು ಮಾತುಕತೆಗಾಗಿ ಹುರಿಯತ್ ಬಳಿ ತೆರಳಿದ್ದಾಗ ಅದು ತನ್ನ ಬಾಗಿಲುಗಳನ್ನು ತೆರೆದಿರಲಿಲ್ಲ. ಈಗ ಅವರು(ಹುರಿಯತ್) ಮಾತುಕತೆಗಳಿಗೆ ಸಿದ್ಧವಾಗಿದ್ದಾರೆ ’’ ಎಂದ ಮಲಿಕ್,‘‘ವ್ಯತ್ಯಾಸವು ಸ್ಪಷ್ಟವಾಗಿದೆ. ವಾತಾವರಣವು ಬದಲಾಗಿದೆ. ಶುಕ್ರವಾರದ ಪ್ರಾರ್ಥನೆಗಳ ಸಂದರ್ಭದಲ್ಲಿಯ ಅಶಾಂತಿಯ ಘಟನೆಗಳೂ ಕಡಿಮೆಯಾಗಿವೆ. ಜನರು ರಾಜ್ಯಕ್ಕೆ ಮರಳುವಂತಾಗುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ ’’ ಎಂದರು.

ಜಮ್ಮು-ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ದಾಳಿಯ ಬಳಿಕ ಸ್ಥಗಿತಗೊಂಡಿರುವ ಮಾತುಕತೆಗಳನ್ನು ಪುನರಾರಂಭಿಸುವಂತೆ ಹುರಿಯತ್ ಮುಖ್ಯಸ್ಥ ಮಿರ್ವೈಝ್ ಉಮರ್ ಫಾರೂಕ್ ಅವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಈ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News