ಲೋಕಸಭೆಯಲ್ಲಿ ಬಿಎಸ್ಪಿ ನಾಯಕನಾಗಿ ದಾನಿಷ್ ಅಲಿ ಆಯ್ಕೆ

Update: 2019-06-23 15:06 GMT

ಲಕ್ನೊ, ಜೂ.23: ಜನತಾದಳ ತೊರೆದು ಬಹುಜನ ಸಮಾಜಪಕ್ಷ(ಬಿಎಸ್ಪಿ) ಸೇರ್ಪಡೆಗೊಂಡಿರುವ ದಾನಿಷ್ ಅಲಿ ಲೋಕಸಭೆಯಲ್ಲಿ ಬಿಎಸ್ಪಿ ನಾಯಕರಾಗಿ ಹಾಗೂ ಮಾಯಾವತಿಯ ಸಹೋದರ ಆನಂದ್ ಕುಮಾರ್‌ರನ್ನು ಉಪನಾಯಕರಾಗಿ ಆಯ್ಕೆ ಮಾಡಿರುವುದಾಗಿ ಪಕ್ಷದ ಪ್ರಕಟಣೆ ತಿಳಿಸಿದೆ.

ಉತ್ತರಪ್ರದೇಶದಲ್ಲಿ 12 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ಮಾರ್ಪಾಟು ಮಾಡಿ ಯುವಜನತೆಯನ್ನು ಆಕರ್ಷಿಸಲು ಬಿಎಸ್ಪಿ ವರಿಷ್ಠೆ ಮಾಯಾವತಿ ಮುಂದಾಗಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ. ಮಾಯಾವತಿಯ ಸೋದರಳಿಯ, 24 ವರ್ಷದ ಆಕಾಶ್ ಆನಂದ್ ಹಾಗೂ ಪಕ್ಷದ ಮಾಜಿ ಉಪಾಧ್ಯಕ್ಷ ರಾಮ್‌ಜಿ ಗೌತಮ್‌ರನ್ನು ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ ಮಾಡಲಾಗಿದೆ.

ಲಕ್ನೊದಲ್ಲಿರುವ ಬಿಎಸ್ಪಿ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪ್ರಮುಖ ಹುದ್ದೆಗಳಿಗೆ ಹೊಸಮುಖಗಳನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ. ನೂತನವಾಗಿ ಆಯ್ಕೆಯಾದ ಸಂಸದರು, ಶಾಸಕರು ಹಾಗೂ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. ದೇಶದಾದ್ಯಂತ ಇವಿಎಂ ಮತದಾನ ಪ್ರಕ್ರಿಯೆ ಕೈಬಿಟ್ಟು ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ಆರಂಭಿಸುವುದು ಇತ್ಯಾದಿ ಹಲವು ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಮಾಯಾವತಿಯ ಉತ್ತರಾಧಿಕಾರಿ ಎಂದೇ ಪರಿಗಣಿಸಲಾಗಿರುವ ಆಕಾಶ್ ಆನಂದ್ ರನ್ನು ಈ ಬಾರಿಯ ಸಾರ್ವತ್ರಿಕ ಚುನಾವಣೆ ಸಂದರ್ಭ ಪಕ್ಷದ ತಾರಾ ಪ್ರಚಾರಕರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ಆನಂದ್‌ಗೆ ಮುಂದಿನ ದಿನದಲ್ಲಿ ಪಕ್ಷದಲ್ಲಿ ಪ್ರಧಾನ ಸ್ಥಾನಮಾನ ದೊರಕುವ ಮುನ್ಸೂಚನೆ ಇದಾಗಿದೆ ಎಂದು ಬಿಎಸ್ಪಿ ಮುಖಂಡರು ಪ್ರತಿಕ್ರಿಯಿಸಿದ್ದರು.

ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಆನಂದ್, 2016 ಮತ್ತು 2017ರಲ್ಲಿ ರಾಜಕೀಯ ಪ್ರಚಾರ ಸಭೆಗಳಲ್ಲಿ ಮಾಯಾವತಿಯೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮಾಯಾವತಿಯೊಂದಿಗೆ ಆನಂದ್ ಮುಂಚೂಣಿಯಲ್ಲಿ ಸ್ಥಾನ ಪಡೆಯುತ್ತಿರುವುದಕ್ಕೆ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಉತ್ತರಿಸಿದ್ದ ಮಾಯಾವತಿ, ಆನಂದ್ ತನ್ನ ಉತ್ತರಾಧಿಕಾರಿಯಾಗಿದ್ದು ಅವರನ್ನು ಮಾಧ್ಯಮಗಳು ಅನವಶ್ಯಕವಾಗಿ ಗುರಿಯಾಗಿಸಿಕೊಂಡು ಟೀಕಿಸುತ್ತಿವೆ . ಅತೀ ಶೀಘ್ರದಲ್ಲೇ ಆನಂದ್ ಪ್ರಮುಖ ಹುದ್ದೆಗೆ ನೇಮಕವಾಗಲಿದ್ದಾರೆ ಎಂದಿದ್ದರು.

ಆನಂದ್‌ರನ್ನು ಪಕ್ಷದ ಪ್ರಮುಖ ಹುದ್ದೆಗೆ ನೇಮಿಸಿರುವುದನ್ನು ಟೀಕಿಸಿರುವ ಬಿಜೆಪಿ, ಬಹುಜನ ಸಮಾಜ ಪಕ್ಷ ವಂಶಾಡಳಿತದ ರಾಜಕೀಯ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿದೆ ಎಂದಿದೆ. ಕಾಂಗ್ರೆಸ್ ಆಗಲಿ, ಸಮಾಜವಾದಿ ಪಕ್ಷವಾಗಲಿ ಅಥವಾ ಬಹುಜನ ಸಮಾಜ ಪಕ್ಷವಾಗಲಿ ಭಾರತ ಅಥವಾ ಭಾರತೀಯರನ್ನು ಪ್ರತಿನಿಧಿಸುತ್ತಿಲ್ಲ. ಇವೆಲ್ಲಾ ಕೌಟುಂಬಿಕ ಪಕ್ಷಗಳಾಗಿವೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೆಪಿ ವೌರ್ಯ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News