ಸೀಮೋಲ್ಲಂಘನ ಬದುಕು ಸಾರ್ಥಕ: ಡಾ.ವಿವೇಕ್ ರೈ

Update: 2019-06-23 17:19 GMT

ಮಂಗಳೂರು, ಜೂ.23: ಸೀಮಿತ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿ ಮತ್ತೊಂದು ಕ್ಷೇತ್ರದತ್ತ ಪಾದಾರ್ಪಣೆ ಮಾಡಿದಾಗ ಸೀಮೋಲ್ಲಂಘನದ ಬದುಕನ್ನು ರೂಪಿಸಲು ಸಾಧ್ಯ. ಇಂತಹ ಪ್ರಯತ್ನವೇ ಜೀವನದಲ್ಲಿ ಸಾರ್ಥಕತೆಯನ್ನು ತಂದು ಕೊಡುತ್ತದೆ ಎಂದು ವಿಶ್ರಾಂತ ಕುಲಪತಿ, ವಿದ್ವಾಂಸ ಡಾ.ಬಿ.ಎ.ವಿವೇಕ್ ರೈ ಪ್ರತಿಪಾದಿಸಿದ್ದಾರೆ.

ಮಂಗಳೂರು ಆಕಾಶವಾಣಿ ಕೇಂದ್ರದ ‘ಹರ್ಷ ವಾರದ ಅತಿಥಿ’ ವಿಶೇಷ ಸಾಧಕರ ಸಂದರ್ಶನಗಳಲ್ಲಿ ಆಯ್ದ 101 ಸಾಧಕರ ಕುರಿತ ‘ಹರ್ಷದ ಅತಿಥಿ- ಧ್ವನಿ ತರಂಗ’ ಕೃತಿಯನ್ನು ಉಡುಪಿಯ ‘ಹರ್ಷ’ ಪ್ರಕಾಶ ರಿಟೇಲ್, ಜಿಲ್ಲಾ ಕಸಾಪ, ಆಕಾಶವಾಣಿ ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಾನವರು ಬದುಕುವ ಕ್ರಮ ವೈವಿಧ್ಯಮಯ. ತಮ್ಮದೇಯಾದ ಕ್ಷೇತ್ರದಲ್ಲಿ ಗುರುತಿಸಿಕೊಂಡ ಜನರು ಸಮೀಪದ ಮತ್ತೊಂದು ಕ್ಷೇತ್ರದತ್ತ ಹೆಜ್ಜೆ ಹಾಕದೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಇದನ್ನು ಹೊರತುಪಡಿಸಿ ಜೀವನವನ್ನು ವಿಸ್ತರಿಸುವವರು ಛಲದಿಂದ ಮುನ್ನುಗ್ಗುತ್ತಾರೆ. ಆಗ ಬೇರೆ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿಯಬಹುದು. ಇದರಿಂದ ಸಹೋದರತ್ವದ ಭಾವನೆ ಇಮ್ಮಡಿಯಾಗುತ್ತದೆ ಎಂದು ಹೇಳಿದರು.

ಪುಸ್ತಕವು ಆದರ್ಶ ನೆಲೆಯಿಂದ ಕೂಡಿದೆ. ಕೃತಿಯಲ್ಲಿನ ಎಲ್ಲ ಸಾಧಕರೂ ಬಡತನದಿಂದಲೇ ಉನ್ನತ ಸ್ಥಾನಕ್ಕೇರಿದವರು. ಬಡವರು, ಹಿಂದುಳಿದವರಿಗೆ ತಾವು ಓದಿ ಮುಂದೆ ಬರಬೇಕು; ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಇರುತ್ತದೆ. ಕೆಳಮಟ್ಟದ ಜೀವನವು ಎಲ್ಲವನ್ನೂ ಕಲಿಸಿಕೊಡುತ್ತದೆ. ಅನುಭವವು ಶ್ರಮಜೀವಿಗಳಿಗೆ ಆಸರೆಯಾಗುತ್ತದೆ. ಬದುಕಿನಲ್ಲಿ ಬೆಳೆಯಬೇಕು ಎನ್ನುವ ಹೋರಾಟದಿಂದ ಆದರ್ಶ ವ್ಯಕ್ತಿಗಳಾಗಬಹುದು ಎಂದು ಅವರು ತಿಳಿಸಿದರು.

ತಳಮಟ್ಟದಲ್ಲಿದ್ದಾಗ ಹಲವು ಸವಾಲುಗಳು ಎದುರಾಗುತ್ತವೆ. ಇಂತಹ ಸವಾಲುಗಳ ಸಾವಿರಾರು ಮೆಟ್ಟಿಲುಗಳನ್ನು ತುಳಿದು ಬಂದವರು ಸಾಧಕರಾಗಲು ಸಾಧ್ಯ. ಲೋಕಾರ್ಪಣೆಗೊಳಿಸಿರುವ ಕೃತಿಯು ಕೇವಲ ಕ್ರಿಕೆಟ್ ಪಟುಗಳ ಆರಾಧನಾ ಕೃತಿಯಲ್ಲ. ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದ ಸಾಧಕರ ಸಂದರ್ಶನದ ಭಂಡಾರವಾಗಿದೆ ಎಂದು ಡಾ.ವಿವೇಕ್ ರೈ ವಿಶ್ಲೇಷಿಸಿದರು.

ಲಿಪ್ಯಂತರಕ್ಕೆ ಶ್ರಮ ಅಧಿಕ: ಆಕಾಶವಾಣಿಯಲ್ಲಿ ನಡೆಯುವ ಸಂದರ್ಶನಗಳ ಆಡಿಯೊ ದಾಖಲೀಕರಣ ಮಾಡಲು ಸದಾನಂದ ಪೆರ್ಲ ಅವರಿಗೆ ಸಲಹೆ ನೀಡಿದ್ದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಅದರ ಪ್ರತಿಫಲವೇ ಇಂದಿನ ‘ಹರ್ಷದ ಅತಿಥಿ- ಧ್ವನಿ ತರಂಗ’ ಕೃತಿ. ಸಂದರ್ಶನದ ಆಡಿಯೋದಿಂದ ಅಕ್ಷರ ರೂಪಕ್ಕೆ ತರುವುದು ತ್ರಾಸದಾಯಕವಾಗಿದ್ದು, ಲಿಪ್ಯಂತರಕ್ಕೆ ಹೆಚ್ಚು ಶ್ರಮದ ಅಗತ್ಯವಿದೆ ಎಂದು ಡಾ.ವಿವೇಕ್ ರೈ ಅಭಿಪ್ರಾಯಪಟ್ಟರು.

ಅಧ್ಯಯನಕ್ಕೆ ಆಕರ ಗ್ರಂಥ: ‘ಮಂಗಳೂರು ದರ್ಶನ’ದಂತಹ ಈ ಮಹತ್ವದ ಕೃತಿಯು ಪತ್ರಿಕೋದ್ಯಮ, ಜನಾಂಗೀಯ ಅಧ್ಯಯನದ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಿ ಮೂಡಿಬಂದಿದೆ. ಸಾಧಕರ ಸಂದರ್ಶನದ ಧ್ವನಿಯನ್ನು ಅಕ್ಷರ ರೂಪಕ್ಕಿಳಿಸಿ 540 ಪುಟಗಳ ಕೃತಿಯನ್ನು ಹೊರತರಲಾಗಿದೆ. ರಾಜಕಾರಣ, ಧಾರ್ಮಿಕ, ಯಕ್ಷಗಾನ, ಸಿನೆಮಾ, ಸಾಹಿತ್ಯ, ಸಂಸ್ಕೃತಿ, ಆರ್ಥಿಕ, ಕೃಷಿ, ಶಿಕ್ಷಣ, ಸಮಾಜಸೇವೆ, ನಾಟಕ, ವೈದ್ಯಕೀಯ, ವಾಣಿಜ್ಯ, ಮಹಿಳಾಮಣಿಗಳು ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರ ಮಾತುಗಳ ಹೂರಣವನ್ನು ತುಂಬಿಕೊಡಲಾಗಿದೆ. ಇದು ಪುಸ್ತಕವಲ್ಲ; ಜೀವಸೆಲೆಗಳ ತಂತು ಎಂದು ವಿದ್ವಾಂಸ ಡಾ.ಬಿ.ಎ.ವಿವೇಕ್ ರೈ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿದರು.

ಈ ಸಂದರ್ಭ ಉಡುಪಿಯ ಪ್ರಕಾಶ್ ರಿಟೇಲ್ ಹರ್ಷ ಗ್ರೂಪ್‌ನ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಕೆ., ಮಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಉಷಾಲತಾ ಸರಪಾಡಿ, ‘ಹರ್ಷ ವಾರದ ಅತಿಥಿ’ ಕೃತಿಯ ಸಂಪಾದಕ ಡಾ.ಸದಾನಂದ ಪೆರ್ಲ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ, ಮಾಜಿ ಶಾಸಕರಾದ ವಿಜಯಕುಮಾರ್ ಸೊರಕೆ, ಶಕುಂತಳಾ ಶೆಟ್ಟಿ, ಬಸ್ತಿ ವಾಮನ ಶೆಣೈ, ಹಾಜಬ್ಬ, ಸಾಹಿತಿ ಚಂದ್ರಕಲಾ ನಂದಾವರ, ರಾಮಚಂದ್ರ ಮಿಜಾರು, ಹರಿಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

‘ಸಾಮಾಜಿಕ ಜಾಲತಾಣ ಜಗತ್ತಲ್ಲ’

ಇಂದಿನ ಯುವ ಜನಾಂಗವು ದಿನದ 24 ಗಂಟೆಗಳ ಕಾಲವೂ ಸಾಮಾಜಿಕ ಜಾಲತಾಣದಲ್ಲಿಯೇ ಮುಳಿಗೇಳುತ್ತಿದೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್‌ಗಳಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ ಮಾತ್ರ ಜೀವಂತ ವ್ಯಕ್ತಿ ಎನ್ನುವ ಪರಿಪಾಠ ಬೆಳೆಯುತ್ತಿದೆ. ಒಂದೆರಡು ದಿನ ಜಾಲತಾಣಗಳಿಗೆ ಭೇಟಿ ನೀಡದೇ ಇದ್ದಲ್ಲಿ ವ್ಯಕ್ತಿ ಸತ್ತೇ ಹೋಗಿದ್ದಾನೆಂದು ನಿರ್ಧಾರಕ್ಕೆ ಬರುತ್ತಿರುವ ಅಪಾಯದಂಚಿಗೆ ಬಂದಿದೆ. ನಿಜ ಜೀವನದಲ್ಲಿ ಸುತ್ತಮುತ್ತಲಿನ ಜನರ ಜತೆ ಬೆರೆತಾಗ ಸಂವಹನ ಹೆಚ್ಚುತ್ತದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News