ಚುನಾವಣೆಯಲ್ಲಿ ಸೋಲಿನ ಬಳಿಕ ಅಖಿಲೇಶ್ ಒಂದು ಕರೆಯೂ ಮಾಡಿಲ್ಲ: ಮಾಯಾವತಿ

Update: 2019-06-24 04:18 GMT

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಅನುಭವಿಸಿ ಒಂದು ತಿಂಗಳ ಬಳಿಕ, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತಮ್ಮ ಪಕ್ಷದ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ವಿರುದ್ಧ ಕಿಡಿ ಕಾರಿದ್ದಾರೆ.

ರವಿವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಉಭಯ ಪಕ್ಷಗಳ ನಡುವಿನ ಹಳೆಯ ವೈಮನಸ್ಯವನ್ನು ಮತ್ತೆ ಕೆದಕಿದ ಮಾಯಾವತಿ, 17 ಕೋಟಿಯ ತಾಜ್ ಕಾರಿಡಾರ್ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ತಮ್ಮನ್ನು ಸಿಲುಕಿಸಲು ಪ್ರಯತ್ನಿಸಿದ್ದರು ಎಂದು ಆಪಾದಿಸಿದರು.

"ಚುನಾವಣೆಯಲ್ಲಿ ಮಹಾಘಟಬಂಧನ ಸೋಲಿನ ಬಳಿಕ ಅಖಿಲೇಶ್ ಅವರು ಒಂದು ಕರೆ ಕೂಡಾ ಮಾಡಿಲ್ಲ. ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಅವರು ನನ್ನ ಜತೆ ಮಾತನಾಡುವಂತೆ ಅಖಿಲೇಶ್‌ಗೆ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಅವರು ಕಿವಿಗೊಡಲಿಲ್ಲ. ನಾನು ಅವರಿಗಿಂತ ಹಿರಿಯಳಾಗಿರುವುದರಿಂದ ನಾನೇ ಅವರಿಗೆ ಕರೆ ಮಾಡಿ ಅವರ ಕುಟುಂಬ ಸದಸ್ಯರು ಸೋತ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೆ" ಎಂದು ವಿವರಿಸಿದರು.

ಈ ಮಹಾಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ತಡೆ ಹಾಕುತ್ತದೆ ಎಂಬ ಭಾರೀ ನಿರೀಕ್ಷೆಯ ಹೊರತಾಗಿಯೂ 14 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಬಿಜೆಪಿ 64 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಫಲಿತಾಂಶ ಪ್ರಕಟವಾದ ತಕ್ಷಣವೇ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಮುಸ್ಲಿಂ ಸಮುದಾಯದ ವಿರುದ್ಧ ಅಖಿಲೇಶ್ ಯಾದವ್ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದೂ ಬಿಎಸ್ಪಿ ನಾಯಕಿ ಆಪಾದಿಸಿದರು. "ನಾನು ಲೋಕಸಭಾ ಚುನಾವಣೆ ಟಿಕೆಟ್ ಹಂಚುತ್ತಿದ್ದಾಗ ಸತೀಶ್ ಮಿಶ್ರಾ ಅವರ ಮೂಲಕ ಅಖಿಲೇಶ್ ಸಂದೇಶ ರವಾನಿಸಿ, ಮತಗಳ ಧ್ರುವೀಕರಣ ತಡೆಯುವ ಸಲುವಾಗಿ ಮುಸ್ಲಿಮರಿಗೆ ಟಿಕೆಟ್ ನೀಡಬೇಡಿ ಎಂದು ಸಲಹೆ ಮಾಡಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ" ಎಂದು ಮಾಯಾವತಿ ಹೇಳಿದರು.

ಅಖಿಲೇಶ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಯಾದವೇತರ ಹಿಂದುಳಿದ ವರ್ಗಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದರು. ಆದ್ದರಿಂದ ಜನ ನಮ್ಮ ಮೈತ್ರಿಕೂಟಕ್ಕೆ ಮತ ಹಾಕಲಿಲ್ಲ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News