ಬಯಲಾದ ಗಡ್ಡದ ರಹಸ್ಯ: ಉದ್ಯಮಿಯ ಮನೆ ಮೇಲೆ ದಾಳಿ ನಡೆಸಿದ ‘ಸಿಬಿಐ ಅಧಿಕಾರಿ’ಯ ಬಂಧನ!

Update: 2019-06-24 09:02 GMT

ಮುಝಫ್ಫರನಗರ್, ಜೂ.24: ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ಸಿನೆಮಾ ‘ಸ್ಪೆಷಲ್ 26’ ಇದರ ನಿಜ ಜೀವನದ ಅವತರಣಿಕೆಯೆಂಬಂತೆ ಸಿಬಿಐ ಅಧಿಕಾರಿ ತಾನೆಂದು ಹೇಳಿಕೊಂಡ ವಂಚಕನೊಬ್ಬ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿ ಕೊನೆಗೆ ಸಿಕ್ಕಿ ಬಿದ್ದಿದ್ದಾನೆ.

ತಾನೊಬ್ಬ ಸಿಬಿಐ ಅಧಿಕಾರಿ ಎಂದು ಪೊಲೀಸರನ್ನು ನಂಬಿಸಿದ ಆತ ಠಾಣೆಗೆ ತೆರಳಿ, ಮುಝಫ್ಫರನಗರದ ಉದ್ಯಮಿಯೊಬ್ಬರ ನಿವಾಸಕ್ಕೆ ದಾಳಿ ನಡೆಸಲು ಇಬ್ಬರು ಕಾನ್‍ ಸ್ಟೇಬಲ್ ಗಳನ್ನು ತನ್ನ ಜತೆ ಕಳುಹಿಸುವಂತೆ ಹೇಳಿದ್ದ.

ಈತ ದಾಳಿ ಸಂದರ್ಭ ಸಿಖ್ ವ್ಯಕ್ತಿಯಂತೆ ನಕಲಿ ಗಡ್ಡ ಇಟ್ಟಿದ್ದರೂ ಆತ ದಾಳಿ ನಡೆಸಿದ ಮನೆಯಲ್ಲಿದ್ದ ಉದ್ಯಮಿ ಆಕಾಶ್ ಆತನನ್ನು ಗುರುತಿಸಿಯೇ ಬಿಟ್ಟಿದ್ದ. ಆತ ಬೇರೆ ಯಾರೂ ಆಗಿರಲಿಲ್ಲ, ಬದಲಾಗಿ ಆಕಾಶ್ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದವನಾಗಿದ್ದ.

ನಂತರ ಪೊಲೀಸರು ಈ ನಕಲಿ ಸಿಬಿಐ ಅಧಿಕಾರಿಯನ್ನು ಬಂಧಿಸಿ ಆತನಲ್ಲಿದ್ದ ನಕಲಿ ದಾಖಲೆಗಳು, ಗುರುತು ಪತ್ರಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ನ್ಯೂಮಂಡಿ ಪೊಲೀಸ್ ಠಾಣೆಗೆ ಶನಿವಾರ ರಾತ್ರಿ 8 ಗಂಟೆಗೆ ಆಗಮಿಸಿ ತನ್ನ ನಕಲಿ ಸಿಬಿಐ ಗುರುತು ಪತ್ರದ ಜತೆ ಉದ್ಯಮಿ ಆಕಾಶ್ ಗೋಯೆಲ್ ಮನೆಗೆ ದಾಳಿ ನಡೆಸಲು ಅನುಮತಿಯಿರುವ ಸರ್ಚ್ ವಾರಂಟ್ ತೋರಿಸಿದ್ದ. ಆದರೆ  ಉತ್ತರಾಖಂಡದಲ್ಲಿ ಅಕ್ಕಿ ಮಿಲ್ ಹೊಂದಿರುವ ಉದ್ಯಮಿಯ ಮನೆಗೆ ದಾಳಿ ಸಂದರ್ಭ ಆತನ ಶಂಕಾಸ್ಪದ ವರ್ತನೆಯನ್ನು ಗಮನಿಸಿ  ನೆರೆಹೊರೆಯವರಿಗೆ ಆತನ ಮೇಲೆ ಸಂಶಯ ಮೂಡಿತ್ತು.

ಕೂಡಲೇ ಅಲ್ಲಿದ್ದವರೊಬ್ಬರಿಗೆ ಆತನ ದನಿಯ ಗುರುತು ಸಿಕ್ಕಿ ಆತನನ್ನು ಹಿಡಿದೆಳೆದಾಗ ಆತನ ಗಡ್ಡ ಆ ವ್ಯಕ್ತಿ ಕೈಗೆ ಬಂದು ಆತ ಸಿಕ್ಕಿ ಬಿದ್ದಿದ್ದ. ಆರೋಪಿಯನ್ನು ಮುಝಫ್ಫರನಗರ್ ನಿವಾಸಿ ತ್ರಿವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ ಆತ ಉದ್ಯಮಿಯ ಜೊತೆ ಕೆಲ ಸಮಯ ಹಿಂದೆ ಕೆಲಸ ಮಾಡುತ್ತಿದ್ದ.

ಬಂಧಿತನ ವಿರುದ್ಧ ವಂಚನೆಗಾಗಿ ಸೆಕ್ಷನ್ 420 ಸಹಿತ ಐಪಿಸಿ ವಿವಿಧ ಸೆಕ್ಷನ್ನುಗಳನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News