ಗುರುತುಚೀಟಿಯಿಂದ ವ್ಯಕ್ತಿಯ ಸಮಾಜ ಪರಿಚಯ ಸಾಧ್ಯ: ಶಾಸಕ ಸುನೀಲ್‍ಕುಮಾರ್

Update: 2019-06-24 09:19 GMT

ಕಾರ್ಕಳ : ಸುಮಾರು 15ವರ್ಷಗಳ ನಂತರ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚಾಲನೆ ದೊರಕಿರುವುದು ಸಂತಸದ  ಸಂಗತಿ. ಅಜೆಕಾರಿನಿಂದ  ಬೆಳ್ಮಣ್ ವಲಯಗಳ ಪತ್ರಕರ್ತರನ್ನೂ ಸೇರಿಸಿಕೊಂಡು ಪತ್ರಕರ್ತರ ಗುರುತಿನ ಚೀಟಿಯನ್ನು ವಿತರಿಸಲಾಗಿದೆ.  ಗುರುತಿನ ಚೀಟಿ ತುಂಬಾ ಅವಶ್ಯ. ಪತ್ರಕರ್ತರಿಗೆ ರಾಜ್ಯ ಸಂಘಟನೆಯ ಗುರುತಿನ ಚೀಟಿ ಇಂದು ಲಭಿಸಿದ್ದು ಪತ್ರಕರ್ತರಿಗೆ ಉಪಯೋಗವಾಗಲಿದೆ. ಅವರಿಂದ ಸಮಾಜದ ಉತ್ತಮ ಸುದ್ದಿಗಳನ್ನು ಬಿತ್ತರಿಸುವ ಜೊತೆಗೆ ಜನರನ್ನು ಜಾಗೃತಗೊಳಿಸುವ ಕೆಲಸ ನಡೆಯಬೇಕಾಗಿದೆ. ಇನ್ನೂ ಉತ್ತಮ ಸಂಘಟನಾತ್ಮಕ ಕಾರ್ಯಗಳು ಪತ್ರಕರ್ತರ ಸಂಘಟದಿಂದ ನಡೆಯಲಿ ಎಂದು ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದರು. 

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಆಶ್ರಯದಲ್ಲಿ ರಚನೆಗೊಂಡ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘಕ್ಕೆ ಶನಿವಾರದಂದು ಹೋಟೆಲ್ ಪ್ರಕಾಶ್‍ನ ಸಂಭ್ರಮ ಸಭಾಂಗಣದಲ್ಲಿ ದೀಪ ಪ್ರಜ್ವಲಿಸಿ ಅಧಿಕೃತವಾಗಿ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾಜಿಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ,  ಸಮಾಜದಲ್ಲಿ ಮಾಧ್ಯಮದ ಜವಾಬ್ದಾರಿ ಮಹತ್ತರವಾದುದು. ಸಮಾಜದ ಅವ್ಯವಸ್ಥೆಗಳನ್ನು ವ್ಯವಸ್ಥಿತಗೊಳಿಸುವಲ್ಲಿ ಪತ್ರಿಕೆಗಳು ಉತ್ತಮ ಕೆಲಸ ಮಾಡುತ್ತಿವೆ. ಸಮಾಜದ ಅಂಕುಡೊಂಕುಗಳನ್ನು ಗುರುತಿಸುವ ಜೊತೆಗೆ ಅವನ್ನು ತಿದ್ದುವ ಪರಿಣಾಮಕಾರಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುವಂತಾಗಲಿ ಎಂದರು.

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕೋಶಾಧಿಕಾರಿ ದಿವಾಕರ ಹಿರಿಯಡ್ಕ ಮಾತನಾಡಿ, ಎಲ್ಲರ ಸಮಸ್ಯೆಗಳನ್ನು ಪತ್ರಕರ್ತರು ಪರಿಹರಿಸುವಲ್ಲಿ ಪ್ರಯತ್ನಿಸುತ್ತಾರೆ. ಆದರೆ ಪತ್ರಕರ್ತರ ಸಮಸ್ಯೆಗಳು ಹಾಗೇ ಉಳಿದುಕೊಳ್ಳತ್ತವೆ. ಪತ್ರಕರ್ತರು ಸುದ್ದಿಗಳ ಒತ್ತಡ, ಪತ್ರಿಕಾ ಕಚೇರಿ ಒತ್ತಡಗಳ  ಮಧ್ಯೆ ಕೆಲಸ ಮಾಡಬೇಕಾಗಿದೆ. ಪತ್ರಕರ್ತರನ್ನು ಉಪಯೋಗಿಸಿಕೊಂಡು ದುರುಪಯೋಗ ಮಾಡಿಕೊಳ್ಳುವವರ ಬಗ್ಗೆಯೂ ಪತ್ರಕರ್ತರು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

 ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ  ಆರ್.ಬಿ.ಜಗದೀಶ್, ಮಾತನಾಡಿ ಇದೀಗ ಪೂರ್ಣಪ್ರಮಾಣದ ಸಂಘಕ್ಕೆ ಚಾಲನೆ ದೊರಕಿದ್ದು,
 ಪತ್ರಕರ್ತರ ಸಂಘಕ್ಕೆ ಕಟ್ಟಡ ಕಟ್ಟಲು ಸೂಕ್ತ ನಿವೇಶನಕ್ಕಾಗಿ ಶಾಸಕರಿಗೆ ತಾಲೂಕು ಪುರಸಭಾ ಆಡಳಿತಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ, ಅದು ಶೀಘ್ರ ಕೈಗೂಡುವುದೆಂಬ ಭರವಸೆ ಇದೆ ಎಂದರು.

ಕಾರ್ಯಕ್ರಮದ ಪ್ರಯೋಜಕ ದಾನಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಉದ್ಯಮಿ ಮೊಹಮ್ಮದ್ ಗೌಸ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಕಳ ಸಂಘದ ಸದಸ್ಯ ಖಲೀಲ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಕಾರ್ಕಳ ಸಂಘದ ಸದಸ್ಯ ಮೊಹಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯದರ್ಶಿ ಸಂಪತ್ ನಾಯಕ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News