ಬಿಎಸ್ಸೆನ್ನೆಲ್ ನಿರ್ವಹಣೆ ಸಂಪೂರ್ಣ ಅಸಾಧ್ಯ: ಟೆಲಿಕಾಂ ಸಚಿವಾಲಯಕ್ಕೆ ಪತ್ರ ಬರೆದ ಹಿರಿಯ ಅಧಿಕಾರಿ

Update: 2019-06-24 10:00 GMT

ಹೊಸದಿಲ್ಲಿ, ಜೂ.24: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಬಿಎಸ್ಸೆನ್ನೆಲ್ ಸರಕಾರದ ಸಹಾಯಕ್ಕಾಗಿ ಮೊರೆಯಿಟ್ಟಿದೆ. ಈಗಿನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದು ಬಹುತೇಕ ಕಷ್ಟಸಾಧ್ಯವಾಗಿದೆ ಹಾಗೂ ಜೂನ್ ತಿಂಗಳ ಉದ್ಯೋಗಿಗಳ ವೇತನಕ್ಕಾಗಿ 850 ಕೋಟಿ ರೂ. ಹೊಂದಿಸುವುದೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಸುಮಾರು 13,000 ಕೋಟಿ ರೂ. ಆರ್ಥಿಕ ಹೊರೆಯನ್ನು ಸಂಸ್ಥೆ ಎದುರಿಸುತ್ತಿದೆ.

ಬಿಎಸ್ಸೆನ್ನೆಲ್ ಸಂಸ್ಥೆಯ ಕಾರ್ಪೊರೇಟ್ ಬಜೆಟ್ ಹಾಗೂ ಬ್ಯಾಂಕಿಂಗ್ ವಿಭಾಗದ ಹಿರಿಯ ಮಹಾಪ್ರಬಂಧಕ ಪುರಣ್ ಚಂದ್ರ ಅವರು ಟೆಲಿಕಾಂ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಸಂಸ್ಥೆಯ ಸಮಸ್ಯೆಗಳನ್ನು ವಿವರಿಸಿ ಪತ್ರ ಬರೆದಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಯ ಭವಿಷ್ಯವನ್ನು ನಿರ್ಧರಿಸುವ ಮುಂದಿನ ಕ್ರಮದ ಕುರಿತಂತೆ ಸಲಹೆಯನ್ನು ನೀಡುವಂತೆಯೂ ಪತ್ರದಲ್ಲಿ ಸರಕಾರವನ್ನು ಕೋರಲಾಗಿದೆ.

ನಷ್ಟದಲ್ಲಿರುವ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಬಿಎಸ್ಸೆನ್ನೆಲ್ ಅಗ್ರ ಸ್ಥಾನದಲ್ಲಿದ್ದು ಸಂಸ್ಥೆಯ ನಿರ್ವಹಣಾ ನಷ್ಟ (ಆಪರೇಟಿಂಗ್ ಲಾಸ್) ಡಿಸೆಂಬರ್ 2018ರಲ್ಲಿ ರೂ 90,000 ಕೋಟಿ ದಾಟಿತ್ತು ಎಂದು ಕೋಟಕ್ ಇನ್‍ಸ್ಟಿಟ್ಯೂಷನಲ್ ಇಕ್ವಿಟೀಸ್ ವರದಿ ತಿಳಿಸಿತ್ತು.

ಕೇಂದ್ರ ಸರಕಾರ ಇಲ್ಲಿಯ ತನಕ ಸಂಸ್ಥೆಯ ಪುನಶ್ಚೇತನಕ್ಕೆ ಯಾವುದೇ ಕ್ರಮವನ್ನೂ ಸೂಚಿಸಿಲ್ಲ. ಜತೆಗೆ ಸಂಸ್ಥೆಯ ಮಹತ್ವವನ್ನು ಪರಿಗಣಿಸಿ ಅದನ್ನು ಮುಚ್ಚುವ ಸಲಹೆಯನ್ನು ತಿರಸ್ಕರಿಸಿದೆ.

ಕೆಲ ತಿಂಗಳುಗಳ ಹಿಂದೆ ಪ್ರಧಾನಿ ಬಿಎಸ್ಸೆನ್ನೆಲ್ ಸಮಸ್ಯೆಗಳನ್ನು ಅವಲೋಕಿಸಿದ್ದರೂ ಅದರ ನಂತರ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬಿಎಸ್ಸೆನ್ನೆಲ್ ನಲ್ಲಿ ಸುಮಾರು 1.7 ಲಕ್ಷ ಉದ್ಯೋಗಿಗಳಿದ್ದು, ಅವರ ವೇತನ ಮತ್ತಿತರ ಸವಲತ್ತುಗಳನ್ನು ನೀಡಲೆಂದೇ ಬಿಎಸ್ಸೆನ್ನೆಲ್ ಸಂಪನ್ಮೂಲಗಳೆಲ್ಲವೂ ವಿನಿಯೋಗವಾಗುತ್ತಿದೆ. ಬಿಎಸ್ಸೆನ್ನೆಲ್ ಆದಾಯದ ಪೈಕಿ ಶೇ. 66ರಷ್ಟು ಮೊತ್ತ 2018ರಲ್ಲಿ ಉದ್ಯೋಗಿಗಳ ವೇತನ, ನಿವೃತ್ತಿ ಸವಲತ್ತುಗಳಿಗೇ ವಿನಿಯೋಗವಾಗಿದೆ. ಈ  ಪ್ರಮಾಣ 2006ರಲ್ಲಿ ಶೇ 21ರಷ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News