'ಪಟಾಕಿ ಸಿಡಿಸಿ ಸಂಭ್ರಮಿಸಿದ ನೆಪದಲ್ಲಿ ಯುವಕರಿಗೆ ಪೊಲೀಸರ ಕಿರುಕುಳ'

Update: 2019-06-24 10:10 GMT

ಮಂಗಳೂರು, ಜೂ. 24: ನ್ಯಾಯಾಲಯದ ಆದೇಶದಂತೆ ಪೊಲೀಸರು ವಶಪಡಿಸಿಕೊಂಡಿದ್ದ ದನಗಳನ್ನು ಅದರ ಮಾಲಕರಿಗೆ ಹಸ್ತಾಂತರಿಸುವ ಸಂದರ್ಭ ಪಟಾಕಿ ಸಿಡಿಸಿ ಸಂಭ್ರಮಿಸಿದ ನೆಪದಲ್ಲಿ ಪಣಂಬೂರು ಪೊಲೀಸರು ಜೋಕಟ್ಟೆಯ ಯುವಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಜೋಕಟ್ಟೆಯ ಮುಸ್ಲಿಂ ಹಿತರಕ್ಷಣಾ ಸಮಿತಿಯು, ಪಟಾಕಿ ಸಿಡಿಸಿ ಸಂಭ್ರಮಿಸಿದವರ ವಿರುದ್ಧ ದಾಖಲಾದ ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದೆ.

ನಗರದ ಖಾಸಗಿ ಹೊಟೇಲಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಮುಖಂಡ ಹಾಗೂ ಗ್ರಾಪಂ ಸದಸ್ಯ ಎ.ಕೆ.ಅಶ್ರಫ್ 62ನೆ ತೋಕೂರು-ಜೋಕಟ್ಟೆ ಗ್ರಾಪಂ ವ್ಯಾಪ್ತಿಯ ಮುಹಮ್ಮದ್ ಹನೀಫ್ ಎಂಬವರು ಎರಡ್ಮೂರು ವರ್ಷದಿಂದ ದನ, ಆಡು,ಕೋಳಿಯ ಸಾಕಾಣಿಕೆ ಮತ್ತು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಜೂ.3ರಂದು ಪಣಂಬೂರು ಪೊಲೀಸರು ಹನೀಫ್ ಅವರ ಹಟ್ಟಿಗೆ ದಾಳಿಗೈದು 23 ದನಗಳನ್ನು ಕಳವುಗೈದ ದನಗಳೆಂದು ಆರೋಪಿಸಿದ್ದಲ್ಲದೆ ಅವುಗಳನ್ನು ವಶಪಡಿಸಿಕೊಂಡು ಪಜೀರಿನ ಗೋಶಾಲೆಗೆ ಸೇರಿಸಿದ್ದರು. ಅಲ್ಲದೆ ಹನೀಫ್‌ರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಈ ಮಧ್ಯೆ ಹನೀಫ್ ಹಾವೇರಿ, ರಾಣೆಬೆನ್ನೂರು, ಚಿತ್ರದುರ್ಗ ಸಂತೆಯಲ್ಲಿ ದನಗಳನ್ನು ಖರೀದಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕ್ರಯ ಚೀಟಿ, ಗೋ ವೈದ್ಯರು ನೀಡಿದ್ದ ಪ್ರಮಾಣ ಪತ್ರ ಹಾಗೂ ಸ್ಥಳೀಯ ಗ್ರಾಪಂ ನೀಡಿದ ದೃಢೀಕರಣ ಪತ್ರವನ್ನು ಪೊಲೀಸರಿಗೆ ತೋರಿಸಿದ್ದರು. ಆದರೆ ಪೊಲೀಸರು ಅದನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಹನೀಫ್ ಎರಡು ದಿನ ಜೈಲಿನಲ್ಲಿ ಕಳೆದಿದ್ದರು. ಜಾಮೀನು ಪಡೆದು ಹೊರ ಬಂದ ಹನೀಫ್ ಬಳಿಕ ಕಾನೂನು ಹೋರಾಟ ನಡೆಸಿದ್ದರು. ಅದರಂತೆ ನ್ಯಾಯಾಲಯವು ಪೊಲೀಸರು ವಶಪಡಿಸಿಕೊಂಡ ದನಗಳನ್ನು ಹನೀಫ್‌ರಿಗೆ ಮರಳಿಸಲು ಆದೇಶಿಸಿತ್ತು. ಹಾಗೇ ಜೂ. 21ರಂದು ಪಣಂಬೂರು-ಕೊಣಾಜೆ ಪೊಲೀಸರು ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಗೋಶಾಲೆಗೆ ತೆರಳಿ 23 ದನಗಳನ್ನು ಬಿಡಿಸಿದ್ದರು. ಈ ವೇಳೆ ಗೋ ಶಾಲೆಯವರು ಪ್ರತೀ ದನಕ್ಕೆ ಪ್ರತೀ ದಿನಕ್ಕೆ ತಲಾ 500 ರೂ. ನೀಡುವಂತೆ ಒತ್ತಾಯಿಸಿದ್ದರು. ಅದರಂತೆ ಮಾಲಕ ಹನೀಫ್ 15 ದಿನಕ್ಕೆ 1,72,500 ರೂ. ಪಾವತಿಸಿ ದನಗಳನ್ನು ಪಡೆದುಕೊಂಡಿದ್ದರು. ಹಾಗೇ ನಾಲ್ಕು ದನಕ್ಕೆ 1 ಪಿಕಪ್‌ನಂತೆ 6 ವಾಹನಗಳಲ್ಲಿ ದನಗಳನ್ನು ಜೋಕಟ್ಟೆಗೆ ಸಾಗಿಸಲಾಗಿತ್ತು.

ಸುದ್ದಿ ತಿಳಿದ ಸ್ಥಳೀಯ ಕೆಲವು ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಅದನ್ನೇ ನೆಪಮಾಡಿಕೊಂಡ ಪೊಲೀಸರು ಸೆ.153ಎ ಅಡಿ ಹನೀಫ್ ಮತ್ತಿತರರ ಮೇಲೆ ಪ್ರಕರಣ ದಾಖಲಿಸಿದ್ದಲ್ಲದೆ ಯುವಕರನ್ನು ಬಂಧಿಸುವ ನೆಪದಲ್ಲಿ ತಡರಾತ್ರಿ ಮನೆಮನೆಗಳಿಗೆ ದಾಳಿ ನಡೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಈಗಾಗಲೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಆಯುಕ್ತರು ಕೂಡ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಇದೀಗ ಪೊಲೀಸರು ರಾತ್ರಿ ದಾಳಿಯಲ್ಲದೆ ಹಗಲು ಹೊತ್ತು ಕೂಡ ಅಮಾಯಕ ಯುವಕರ ಬೇಟೆಯಲ್ಲಿ ತೊಡಗಿದ್ದಾರೆ. ಇದರಿಂದ ಯುವಕರಲ್ಲದೆ, ಮಹಿಳೆಯರು ಕೂಡ ಭಯಭೀತರಾಗಿದ್ದಾರೆ ಎಂದು ಅಶ್ರಫ್ ತಿಳಿಸಿದ್ದಾರೆ.

ಕಾನೂನು ಹೋರಾಟ

ಗೋ ಶಾಲೆಯವರು 23 ದನಗಳಿಗೆ 15 ದಿನಕ್ಕೆ 1,72,500 ರೂ. ಪಾವತಿಸಿ ಬಿಡುಗಡೆಗೊಳಿಸಿ ಎಂದಿರುವುದು ಕಾನೂನು ಬಾಹಿರ. ಸರಕಾರ ಇಂತಹ ಅಕ್ರಮ ವಸೂಲಿಯ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಸಮಿತಿಯು ಕಾನೂನು ಹೋರಾಟ ಮಾಡಲಿದೆ ಎಂದು ಅಶ್ರಫ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಒಎಂ ಅಬ್ದುಲ್ ಖಾದರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಶೇಕುಂಞಿ, ಅಂಜುಮಾನ್ ಅನಾಥಾಶ್ರಮದ ಸಂಚಾಲಕ ಅಬ್ದುಲ್ ಖಾದರ್ ಗೋವಾ. ಜೆಡಿಎಸ್ ಮುಖಂಡ ಬಿ.ಕೆ.ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News