ಆಹಾರ ಸುರಕ್ಷತೆಯ ಬಗ್ಗೆ ಸ್ವ ಅರಿವು ಅಗತ್ಯ: ಅಡ್ಡೂರು ಕೃಷ್ಣರಾವ್

Update: 2019-06-24 11:10 GMT

ಪುತ್ತೂರು: ತಿನ್ನದೇ ಯಾರಿಂದಲೂ ಬದುಕಲು ಸಾಧ್ಯವಿಲ್ಲ. ಆದರೆ ನಾವು ತಿನ್ನುವ ಆಹಾರ ಎಷ್ಟು ಸುರಕ್ಷಿತ ಎಂಬ ಅರಿವು ನಮಗಿರಬೇಕು. ವಿಷಪೂರಿತ ಆಹಾರ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಬಲಿಯಾಗಬೇಕಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಅಡ್ಡೂರು ಕೃಷ್ಣರಾಯ ಹೇಳಿದರು. 

ಅವರು ರವಿವಾರ ಬಹುವಚನಂ ಆಯೋಜನೆಯಲ್ಲಿ ಪುತ್ತೂರಿನ ದರ್ಬೆ ಬಹುವಚನಂನ ಪದ್ಮಿನಿ ಸಭಾಂಗಣದಲ್ಲಿ ನಡೆದ `ಆಹಾರದಲ್ಲಿ ವಿಷ' ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಸ್ತುತ ನಾವು ಬಳಸುವ ಅಕ್ಕಿ, ಗೋದಿ ಸೇರಿದಂತೆ ಆಹಾರ ಧಾನ್ಯ, ತರಕಾರಿ, ಹಣ್ಣು, ಹಾಲು, ಬೇಕರಿ ತಿಂಡಿ ತಿನಿಸುಗಳು ಎಲ್ಲದರಲ್ಲೂ ವಿಷ ತುಂಬಿದೆ. ಕಬ್ಬಿಣದ ಮೊಳೆ, ಕಲ್ಲು ನುಂಗಿ ಬದುಕಿದವರಿದ್ದಾರೆ. ಆದರೆ ಎಲ್ಲರಿಗೂ ಇದು ಸಾದ್ಯವಿಲ್ಲ. ರಾಸಾಯನಿಕ ಬಳಕೆಯಾದ ಆಹಾರ ವಸ್ತುಗಳು ದೇಹಕ್ಕೆ ವಿಷಕಾರಿಯಾಗಿದ್ದು, ನಾವು ತಿನ್ನುವ ಆಹಾರದ ಬಗ್ಗೆ ಜಾಗ್ರತೆ ವಹಿಸಿದಲ್ಲಿ ಔಷಧಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದನ್ನು ತಡೆಯಬಹುದು ಎಂದರು. 

ಒಂದೆಡೆ ಅಹಾರಕ್ಕೆ ರಾಸಾಯನಿಕ ಬಳಕೆಯಾದರೆ ಇನ್ನೊಂದೆಡೆ ಕಲಬೆರಕೆ ನಡೆಯುತ್ತಿದೆ. ವಿಷವಿಲ್ಲದ ಅಕ್ಕಿ ಬೇಕು ಎಂದಾದಲ್ಲಿ ಸಿಗುತ್ತದೆ. ಆದರೆ ಅದಕ್ಕೆ ಹುಡುಕಾಟ ನಡೆಸಬೇಕು. ಸಾವಯವ ಎಂಬುದು ವಿಷವಿಲ್ಲದ ಆಹಾರ. ನಮ್ಮ ಆಹಾರವನ್ನು ನಾವೇ ಬೆಳೆಯಬೇಕು. ನಮಗೆ ಬೇಕಾದ ತರಕಾರಿಗಳನ್ನು ನಮ್ಮ ಮನೆಯ ಅಂಗಳದಲ್ಲಿ, ಟೆರೇಸ್ ಮೇಲೆಯೂ ಬೆಳೆಯಲು ಸಾಧ್ಯವಿದೆ ಎಂದ ಅವರು ಕಾಡಿನಲ್ಲಿ ಕೋಟ್ಯಾಂತರ ಗಿಡ, ಮರ, ಗೆಡ್ಡೆಗಳು ಬೆಳೆಯುತ್ತಿದೆ. ಅದಕ್ಕೆ ಯಾವುದಕ್ಕೂ ರಾಸಾಯನಿಕ ಗೊಬ್ಬರ ಬೇಕಾಗಿಲ್ಲ. ಅದರಂತೆ ನಮ್ಮ ಜಮೀನಿನಲ್ಲಿ, ತೋಟಗಳಲ್ಲಿಯೂ ರಾಸಾಯನಿಕವಿಲ್ಲದೆ ಬೆಳೆಯಲು ಸಾಧ್ಯವಿದೆ. ರಾಸಾಯನಿಕ ಬಳಕೆಯ ವಸ್ತುಗಳಿಂದ ರೋಗಗಳು ಎಲ್ಲಿಂದಲೂ ಮತ್ತು ಯಾವ ರೂಪದಲ್ಲಿಯೂ ಬರಬಹುದು ಎಂದರು. 

ಸತ್ಯವನ್ನು ಅಲುಗಾಡಿಸಲಾಗದು. ಆದರೆ ನಾವು ಅದನ್ನು ನೋಡುವ ಕೋನ ಬದಲದರೆ ಸತ್ಯ ಅಲ್ಲಾಡಿದಂತೆ ಕಾಣುತ್ತದೆ. 2018ರ ಆರಂಭದಲ್ಲಿ ಅಮೇರಿಕಾ ಸೇರಿದಂತೆ ಹಲವಾರು ದೇಶಗಳು ನಮ್ಮ ಅಕ್ಕಿ ಮತ್ತಿತರ ಪದಾರ್ಥಗಳನ್ನು ವಿಷಕಾರಿಯೆಂದು ತಿರಸ್ಕರಿಸಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು ಎಂದು ನೆನಪಿಸಿದ ಅವರು ಆಹಾರಕ್ಕೆ ವಿಷ ಹಾಕಿ ನೀಡಿದವರಿಗೆ ಈ ವಿಷಕ್ಕೆ ಬಲಿಯಾದವರ ಶಾಪ ತಟ್ಟುತ್ತದೆ. ಆ ತಪ್ಪು ಅವರಿಗೆ ಅರಿವಾಗಬೇಕಾಗಿದೆ ಎಂದರು. 

ನಿರತ ನಿರಂತದ ಐಕೆ ಬೊಳುವಾರು ಸ್ವಾಗತಿಸಿದರು. ಬಹುವಚನಂನ ಡಾ. ಶ್ರೀಶಕುಮಾರ್ ಎಂ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News