ಮಕ್ಕಳ ಹಕ್ಕುಗಳನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಅಗತ್ಯ: ರೆನ್ನಿ ಡಿಸೋಜ

Update: 2019-06-24 13:06 GMT

ಉಡುಪಿ, ಜೂ.24: 1992ರಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಕುರಿತು ಭಾರತ ಸರಕಾರ ಸಹಿ ಹಾಕಿದ ಬಳಿಕ ಮೊತ್ತ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಆದುದರಿಂದ ಇದರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರಸ್ತಾಪ ಅತ್ಯಗತ್ಯ. ಇದರಿಂದ ಸಮಗ್ರವಾದ ಶಿಕ್ಷಣ ನೀತಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಪಡಿ ಮಂಗಳೂರು ಇದರ ನಿರ್ದೇಶಕ ರೆನ್ನಿ ಡಿಸೋಜ ಅಭಿಪ್ರಾಯ ಪಟ್ಟಿದ್ದಾರೆ.

ಪಡಿ ಮಂಗಳೂರು, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಲಯನ್ಸ್ ಕ್ಲಬ್ ಸಂತೆಕಟ್ಟೆ, ವಿದ್ಯಾಮಿತ್ರ ಫೌಂಡೇಶನ್, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಅಂಬಾಗಿಲು ಸೆಂಟಿನಿಯಲ್ ಲಯನ್ಸ್ ಭವನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ಕರಡು-2019 ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ಮನೆಯಿಂದಲೇ ಪ್ರಥಮ ಕಲಿಕೆ ಆರಂಭವಾಗುತ್ತದೆ. ಆದುದ ರಿಂದ 0-3ವರ್ಷದೊಳಗಿನ ಮಕ್ಕಳನ್ನು ಕೂಡ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ 0-3 ವರ್ಷದ ಮಕ್ಕಳು ಸೇರಿದಂತೆ 18 ವರ್ಷದೊಳಗಿನ ಎಲ್ಲ ಮಕ್ಕಳ ಹಕ್ಕುಗಳನ್ನು ಕೂಡ ಈ ನೀತಿಯಲ್ಲಿ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಭಾರತದಲ್ಲಿ ಭಿನ್ನ ಭಿನ್ನ ಸಂಸ್ಕೃತಿ, ಭಾಷೆ ಹಾಗೂ ಭೌಗೋಳಿಕ ಪರಿಸರ ಹೊಂದಿರುವ ರಾಜ್ಯಗಳಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ರಚಿಸುವಾಗ ಇವುಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಎಲ್ಲ ರಾಜ್ಯಗಳಲ್ಲಿರುವ ಜನರ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ತೊಂದರೆ ಆಗದ ರೀತಿಯಲ್ಲಿ ಶಿಕ್ಷಣ ನೀತಿ ರೂಪಿಸಬೇಕು. ಇದು ಕೇವಲ ಒಂದು ರಾಜ್ಯದ ನೀತಿಯಾಗಿರದೇ, ಇಡೀ ದೇಶದ ನೀತಿಯಾಗಿರುವುದರಿಂದ ಇದರಲ್ಲಿ ಎಲ್ಲರ ಒಳೊಳ್ಳುವಿಕೆ ಬಹಳ ಮುಖ್ಯ ಎಂದರು.

ಪ್ರಜಾಪ್ರಭುತ್ವ ದೇಶದಲ್ಲಿ ಯಾವುದೇ ನೀತಿ ಜಾರಿಗೆ ತರುವ ಮೊದಲು ಅದರಲ್ಲಿ ಜನರ ಭಾಗವಹಿಸುವಿಕೆಯ ಮೂಲಕ ಅವರ ಅಭಿಪ್ರಾಯವನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು. ಅದರಿಂದ ಸ್ಪಷ್ಟವಾದ ನೀತಿ ಜಾರಿಗೆ ತರಲು ಸಾಧ್ಯವಾುತ್ತದೆ ಎಂದು ಅವರು ಹೇಳಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಪೂರಕ ಅಂಶ ಗಳು ಅಡಕವಾಗಿವೆ. ಅವುಗಳ ಆಧಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಕೆಲಸ ಮಾಡಿದರೆ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿದ್ಯಾಮಿತ್ರ ಫೌಂಡೇಶನ್‌ನ ಅಧ್ಯಕ್ಷೆ ದಿವ್ಯಾ ಹೆಗ್ಡೆ, ಸಂತೆಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಹ್ಯೂಬರ್ಟ್ ಲಿವಿಸ್, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಅಬ್ದುಲ್ ಸಲಾಂ, ಲಯನ್ಸ್ ಕ್ಲಬ್‌ನ ಸುದರ್ಶನ್ ನಾಯಕ್, ರಾಜೇಶ್,ರವಿರಾಜ್ ನಾಯಕ್ ಉಪಸ್ಥಿತರಿದ್ದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕಾಲೇಜಿನ ಸಂಯೋಜಕ ಡಾ.ದುಗ್ಗಪ್ಪ ಕಜೆಕಾರ್ ಹಾಗೂ ಮಣಿಪಾಲ ಮಾಹೆ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲ್‌ರಿಕ್ ಡಿಸೊೀಜ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ ಕುಂದರ್ ಸ್ವಾಗತಿಸಿ ದರು. ಪಡಿ ಸಂಸ್ಥೆಯ ಆ್ಯನ್ ಫೆರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಯೋಜಕ ವಿವೇಕ್ ವಂದಿಸಿದರು. ಉಪನ್ಯಾಸಕ ಗಣೇಶ್ ಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News