ಹೆಜಮಾಡಿ ಮುಟ್ಟಳಿವೆಗೆ ಅಧಿಕಾರಿಗಳ ಭೇಟಿ; ಪರಿಶೀಲನೆ

Update: 2019-06-24 13:31 GMT

ಪಡುಬಿದ್ರಿ: ಕಾಮಿನಿ ನದಿಯಲ್ಲಿ ಮೀನುಗಳು ಸತ್ತಸ್ಥಿತಿಯಲ್ಲಿ ಕಂಡು ಬಂದಿದ್ದು, ಅಲ್ಲದೆ ನದಿಯ ನೀರು ಮಲಿನವಾಗಿರುವ ಹಿನ್ನಲೆಯಲ್ಲಿ ಸೋಮವಾರ ವಿವಿಧ ಇಲಾಖಾಧಿಕಾರಿಗಳು ಹೆಜಮಾಡಿ ಮುಟ್ಟಳಿವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನದ ನಡೆಸಿದ್ದಾರೆ.

ಉಡುಪಿ ಜಿಲ್ಲಾ ಪರಿಸರ ಇಲಾಖೆ, ಜಿಲ್ಲಾ ಮೀನುಗಾರಿಕಾ ಇಲಾಖೆ, ಮಂಗಳೂರು ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರ ಮತ್ತು ಯುಪಿಸಿಲ್ ಸ್ಥಾವರದ ತಜ್ಞರ ತಂಡ ಹೆಜಮಾಡಿಯ ಮುಟ್ಟಳಿವೆಗೆ ಆಗಮಿಸಿ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದರು. 

ಸೋಮವಾರವೂ ಮುಟ್ಟಳಿವೆಯ ದಕ್ಷಿಣ ಭಾಗದಲ್ಲಿ ಸತ್ತ ಮೀನಿನ ರಾಶಿಗಳನ್ನು, ಮುಟ್ಟಳಿವೆಯಲ್ಲಿ ಹರಿಯುತ್ತಿರುವ ಕಲುಷಿತ ನೀರನ್ನು ಹಾಗೂ ಹೊಳೆ ನೀರು ಕಲುಷಿತಗೊಂಡಿದ್ದನ್ನು ವೀಕ್ಷಿಸಿದರು.

ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಹೆಜಮಾಡಿ ಏಳೂರು ಮೊಗವೀರ ಸಭಾದ ಅಧ್ಯಕ್ಷ ಸದಾಶಿವ ಕೋಟ್ಯಾನ್, ಸ್ಥಳೀಯರಾದ ಲಲಿತ್ ಕುಮಾರ್ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಮುಟ್ಟಳಿವೆಯಿಂದ ಸಮುದ್ರಕ್ಕೆ ಸೇರುವ ಜಾಗದ ನೀರು ಮತ್ತು ಮಣ್ಣು, ಮೀನುಗಳು ಸತ್ತು ಬಿದ್ದ ಜಾಗದ ನೀರು, ಮಣ್ಣು ಮತ್ತು ಸತ್ತುಬಿದ್ದ ಮೀನು, ಸಮುದ್ರ ನೀರು,  ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕಲ್ಸಂಕ ಬಳಿ ಕಾಮಿನಿ ಹೊಳೆಯ ನೀರು, ಪಡುಬಿದ್ರಿ ಬೀಚ್ ಬಳಿ ಕಲುಷಿತಗೊಂಡ ಮನೆಯೊಂದರ ಬಾವಿಯ ನೀರುಗಳ ಮಾದರಿಗಳನ್ನು ಪಡೆದು ತಪಾಸಣೆಗಾಗಿ ಕೊಂಡೊಯ್ದರು. 

ಮಂಗಳೂರು ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ತಜ್ಞ ಅಧಿಕಾರಿ ಡಾ. ವೀಣಾ ಶೆಟ್ಟಿಗಾರ್, ಇಲಾಖಾ ಮುಖ್ಯಸ್ಥರಾದ ಡಾ.ಪ್ರತಿಭಾ ರೋಹಿತ್ ನಿರ್ದೇಶನದಂತೆ ಘಟನಾ ಸ್ಥಳದ ವಿವಿಧ ಮಾದರಿಗಳನ್ನು ಪಡೆಯಲಾಗಿದ್ದು, ಇಲಾಖಾ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುವುದು. ಈ ಬಗ್ಗೆ 5 ದಿನದ ಬಳಿಕ ವರದಿ ಸಿದ್ಧವಾಗಲಿದೆ ಎಂದರು.

ಸ್ಥಳೀಯ ಮೀನುಗಾರ ಕೃಷ್ಣ ಕೃಷ್ಣ ಕೋಟ್ಯಾನ್ ಎಂಬವರು ಯುಪಿಸಿಎಲ್ ಕಲ್ಲಿದ್ದಲು ಶೇಖರಣೆಯ ಯಾರ್ಡ್‍ನಿಂದ ಹೊರ ಬಿಡಲಾಗುತ್ತಿರುವ ನೀರಿನ ಮೂಲಕ ಕಲ್ಲಿದ್ದಲು ಸಮುದ್ರವನ್ನು ಸೇರುತ್ತಿದ್ದು, ಅದರಿಂದ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೆ ಮೀನುಗಳು ಸತ್ತಿದೆ ಎಂದು ಅಧಿಕಾರಿಗಳ ಮುಂದೆ ದೂರಿಕೊಂಡರು. 

ಅದಾನಿ-ಯುಪಿಸಿಎಲ್ ತಜ್ಞರಾದ ಚೆನ್ನಬಸಪ್ಪ ಮತ್ತವರ ತಂಡವೂ ಆಗಮಿಸಿ ಪರಿಶೀಲನೆ ನಡೆಸಿ ಮಾದರಿಗಳನ್ನು ಕೊಂಡೊಯ್ದಿದೆ. ಈ ಸಂದರ್ಭ ಮಾತನಾಡಿದ ಅವರು, ಕಾಮಿನಿ ಹೊಳೆಗೆ ಕಲ್ಲಿದ್ದಲು ನೀರು ಬರುವ ಸಾಧ್ಯತೆ ಇಲ್ಲವೇ ಇಲ್ಲ. ಯೋಜನಾ ಪ್ರದೇಶದ ಪಕ್ಕದಲ್ಲಿ ಕೆರೆ ನಿರ್ಮಿಸಿ ಅದರ ನೀರನ್ನು ಮರಳಿ ಉಪಯೋಗಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಮೀನುಗಳು ಸತ್ತು ಬಿದ್ದಿರುವುದಕಕ್ಕೂ ಯುಪಿಸಿಎಲ್‍ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಪಡುಬಿದ್ರಿ ಬೀಚ್ ಬಳಿ ಕಾಮಿನಿ ಹೊಳೆಯ ಸಮೀಪದ ಸದಾಶಿವ ಪಡುಬಿದ್ರಿ ಎಂಂಬವರ ಮನೆ ಬಾವಿಯ ನೀರು ಕಲುಷಿತಗೊಂಡಿದೆ. ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಪಾಶ್ರ್ವನಾಥ್, ಇಲಾಖೆಯ ಅಧಿಕಾರಿ ಕಿರಣ್ ಜತೆಗಿದ್ದರು.

ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ: 
ಮಾದರಿಗಳನ್ನು ಪಡೆಯಲಾಗಿದೆ. ಮುಂದಿನ ವರದಿಯಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿ ವಿವಿಧ ಆಯಾಮಗಳ ಬಗ್ಗೆ ಪರಿಶೀಲನೆ ನಡೆಯಲಿದೆ. ಮುಟ್ಟಳಿವೆ ತೆರೆಯುವ ಮುನ್ನ ಬದುಕಿದ್ದ ಮೀನುಗಳು ಮುಟ್ಟಳಿವೆ ತೆರೆದ ತಕ್ಷಣ ಮೀನುಗಳು ಸಾಯಲು ಕಾರಣವೇನೆಂದು ತಿಳಿಯಬೇಕಿದೆ. ಆಮ್ಲಜನಕ ಅಥವಾ ಲವಣಾಂಶಗಳ ವ್ಯತ್ಯಯದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. 
ಲಕ್ಷ್ಮೀಕಾಂತ್, ಜಿಲ್ಲಾ ಪರಿಸರ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News