ರಾಜ್ಯದಲ್ಲಿ ಇನ್ನು ಕಟ್ಟಡ ನಿರ್ಮಾಣದ ಜೊತೆಗೆ ಮಳೆನೀರು ಕೊಯ್ಲು: ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ

Update: 2019-06-24 13:43 GMT

ಮಂಗಳೂರು, ಜೂ. 24: ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ‘ಮಳೆ ನೀರು ಕೊಯ್ಲು’ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ‘ಹಸಿರು ಕಟ್ಟಡ ನೀತಿ’ (ಗ್ರೀನ್ ಬಿಲ್ಡಿಂಗ್ ಪಾಲಿಸಿ)ಗೆ ಸಂಬಂಧಿಸಿ ಕರಡು ನೀತಿ ಪ್ರಕಟಿಸಲಾಗಿದ್ದು, ಶೀಘ್ರವೇ ನೂತನ ನೀತಿ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಮುಂಬರುವ ದಿನದಲ್ಲಿ ನಗರ ವ್ಯಾಪ್ತಿಯಲ್ಲಿ ಹೊಸ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಹಸಿರು ಕಟ್ಟಡ ನೀತಿ ಅನುಸರಿಸಬೇಕಿದೆ. ಈ ಸಂಬಂಧ ಕಡು ನೀತಿ ಪ್ರಕಟಿಸಲಾಗಿದೆ ಎಂದರು.

ನೂತನ ನೀತಿಯನ್ವಯ ಹೊಸ ಮನೆ/ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ವ್ಯವಸ್ಥೆ ಅನುಷ್ಠಾನಿಸಬೇಕು. ಕಸದ ನಿರ್ವಹಣೆಗೆ ಹೊಸ ಸೂತ್ರ ಜಾರಿಗೊಳಿಸಿ ಸ್ವಚ್ಚತೆಗೆ ವಿಶೇಷ ಆದ್ಯತೆ ಹಾಗೂ ಸೋಲಾರ್ ಅಳವಡಿಕೆಗೆ ಈ ನೀತಿಯಡಿಯಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಗಿಡ ನೆಡುವ ಬಗ್ಗೆಯೂ ಸೂಕ್ತ ಕಾನೂನು ಜಾರಿಗೊಳಿಸಲಾಗುವುದು. ನಿಯಮಗಳನ್ನು ಅನುಸರಿಸುವವರಿಗೆ ತೆರಿಗೆಯಲ್ಲಿ ವಿನಾಯಿತಿಯಂತಹ ಪ್ರೋತ್ಸಾಹಕ ಕ್ರಮ ಹಾಗೂ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ರೀತಿಯಲ್ಲಿ ಈ ನೀತಿಯನ್ನು ಜಾರಿಗೆ ತರಲಾಗುವುದು. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆಯೂ ಸೂಕ್ತ ಕಾನೂನು ಜಾರಿಗೆ ತರಲಾಗುವುದು ಎಂದರು.

ಮನೆ ಕಟ್ಟುವ ಸಮಯದಲ್ಲಿ ಲೈಸೆನ್ಸ್ ಸಿಗಬೇಕಾದರೆ ಮಳೆಕೊಯ್ಲು ಕಡ್ಡಾಯವಾಗಿರಬೇಕು. ಈ ಬಗ್ಗೆ ಸ್ಥಳೀಯ ನುರಿತರಿಂದ ಅನುಮತಿ ಪಡೆಯುವ ಕ್ರಮವನ್ನು ನೀತಿಯಲ್ಲಿ ಸೇರಿಸಲಾಗುವುದು ಎಂದರು.

ಕೇಂದ್ರ ಸರಕಾರಕ್ಕೆ ಗೋಹತ್ಯೆ ನಿಷೇಧದ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಸೂಕ್ತ ಕಾನೂನನ್ನು ಕೇಂದ್ರ ಸರಕಾರ ಜಾರಿಗೊಳಿಸಲಿ. ದೇಶ ಕಾನೂನಲ್ಲಿ ನಡೆಯಬೇಕು. ಭಯ-ಶಕ್ತಿಯಿಂದ ನಡೆಯಬಾರದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಆದರೂ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೋ ಸಾಗಾಟ ಕೂಡ ಇದರಲ್ಲಿ ಸೇರಿದೆ. ಕಾನೂನಿಗೆ ವಿರುದ್ಧ ಯಾರಾದರು ವರ್ತಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಂಗಳೂರು ಪಾಲಿಕೆಯಲ್ಲಿ ಆನ್‌ಲೈನ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಜುಲೈ ಮೊದಲ ವಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಎಲ್ಲಾ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲಿದ್ದಾರೆ ಎಂದರು.

ಐಎಂಎ ವಂಚನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್ ಎಸ್‌ಐಟಿ ತನಿಖೆ ಸದ್ಯ ನಡೆಯುತ್ತಿದೆ. ಜನಸಾಮಾನ್ಯರಿಗೆ ನ್ಯಾಯ ಸಿಗುವ ಕೆಲಸ ಎಸ್‌ಐಟಿ ಮಾಡಲಿದೆ. ಅದೇ ಸಂಸ್ಥೆಯ ಶಾಲೆಯಲ್ಲಿ ಸುಮಾರು 1800 ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರಿಗೆ ಹಾಗೂ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಜತೆಗೆ ಮಾತುಕತೆ ನಡೆಸಲಾಗಿದೆ ಎಂದರು.

ಗ್ರಾ.ಪಂ.ನಲ್ಲಿ ಆಧಾರ್ ತಿದ್ದುಪಡಿ ಪ್ರಸ್ತುತ ಸ್ಥಗಿತವಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್ ಅವರು, ಆಧಾರ್ ತಿದ್ದುಪಡಿ ಗ್ರಾಮ ಮಟ್ಟದಲ್ಲಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿತ್ತು. ಆದರೆ, ಸದ್ಯ ತಿದ್ದುಪಡಿ ಸ್ಥಗಿತವಾಗಿುವ ಬಗ್ಗೆ ಈಗ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News