ಕಾಪು: ಲಕ್ಷ್ಮೀ ನಗರದಲ್ಲಿ ನೆರೆ ಭೀತಿ; ತಹಸೀಲ್ದಾರ್ ಭೇಟಿ

Update: 2019-06-24 13:58 GMT

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಪಡುಗ್ರಾಮದ ಲಕ್ಷ್ಮೀ ನಗರ ಕಾಲನಿಯಲ್ಲಿ ಮಳೆಗೆ ಕೃತಕ ನೆರೆಯ ಭೀತಿ ಉಂಟಾಗಿದೆ. ಈ ಪರಿಸರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲದೆ ಮಳೆ ಬಂದಾಗ ಕೃತಕ ನೆರೆಯ ಭೀತಿ ಉಂಟಾಗುತ್ತದೆ. ಲೇಔಟ್ ನಿರ್ಮಾಣ ಮತ್ತು ಮನೆ ಕಟ್ಟುವ ಸಂದರ್ಭ ಮೂಲಭೂತ ಅವಶ್ಯಕತೆಗಳಾದ ರಸ್ತೆ ರಚನೆ ಮತ್ತು ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಜೋಡಿಸದೇ ಇರುವುದರಿಂದ ಜನ ತೀವ್ರ ತೊಂದರೆ ಎದುರಿಸುವಂತಾಗಿತ್ತು. ನೀರು ಹರಿಯಲೆಂದು ಬಿಟ್ಟಿದ್ದ ತೋಡಿನ ಮೇಲೆಯೇ ಡಾಮಾರು ಹಾಕಿದ್ದು, ನೀರು ಹರಿದು ಹೋಗುತಿಲ್ಲ. ಟೌನ್ ಪ್ಲಾನಿಂಗ್ ನಿಯಮಗಳನ್ನು ಪಾಲಿಸದೆ ಇರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. 

ಈ ದೂರಿನ ಹಿನ್ನಲೆಯಲ್ಲಿ ರವಿವಾರ ಸ್ಥಳೀಯರು ಕಾಪು ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಸ್ಯೆಯನ್ನು ಪರಿಶೀಲಿಸಿದರು. ನೀರು ಹರಿವಿಗೆ ಪೂರಕವಾಗುವಂತೆ ತೋಡನ್ನು ಬಿಡಿಸಿಕೊಟ್ಟಿದ್ದು, ಸಾರ್ವಜನಿಕ ಪ್ರಶಂಸೆಗೆ ಕಾರಣರಾಗಿದ್ದಾರೆ.

ಕಾಪು ಪುರಸಭೆ ಇಂಜಿನಿಯರ್ ಪ್ರತಿಮಾ, ಪುರಸಭಾ ಸದಸ್ಯೆ ಅಶ್ವಿನಿ, ಕಾಪು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಗಣೇಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News