ಪಾಕಿಸ್ತಾನದಂತೆ ಭಾರತೀಯ ವಾಯುಪಡೆ ಎಂದೂ ನಾಗರಿಕ ಯಾನವನ್ನು ತಡೆದಿಲ್ಲ: ಐಎಎಫ್ ಮುಖ್ಯಸ್ಥ

Update: 2019-06-24 14:00 GMT

ಹೊಸದಿಲ್ಲಿ, ಜೂ.24: ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ವಾಯುದಾಳಿಯ ನಂತರ ತನ್ನ ವಾಯುಮಾರ್ಗವನ್ನು ಮುಚ್ಚುವ ಪಾಕಿಸ್ತಾನದ ನಿರ್ಧಾರ ಅವರ ಸಮಸ್ಯೆಯಾಗಿದ್ದು ಪಾಕ್‌ನಂತೆ ಐಎಎಫ್ ಎಂದೂ ನಾಗರಿಕರ ವಾಯುಮಾರ್ಗವನ್ನು ತಡೆದಿಲ್ಲ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಬಿ.ಎಸ್ ಧನೊವ ತಿಳಿಸಿದ್ದಾರೆ.

 ಗ್ವಾಲಿಯರ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಶಲ್ ಧನೋವ, ಈ ಮಾತನ್ನು ಹೇಳಿದ್ದಾರೆ. ಫೆಬ್ರವರಿ 27ರಂದು ಕೇವಲ ಎರಡು ಅಥವಾ ಮೂರು ಗಂಟೆಗಳ ಕಾಲ ಶ್ರೀನಗರದ ವಾಯುಮಾರ್ಗವನ್ನು ಮುಚ್ಚಲಾಗಿತ್ತು. ಉಳಿದಂತೆ ನಮ್ಮ ಆರ್ಥಿಕತೆ ಪಾಕಿಸ್ತಾನದ ಆರ್ಥಿಕತೆಗಿಂತ ಬಹಳ ದೊಡ್ಡದು ಮತ್ತು ಪ್ರಬಲವಾಗಿದ್ದು ನಮ್ಮ ವಾಯುಮಾರ್ಗವನ್ನು ಪಾಕಿಸ್ತಾನ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಧನೊವ ತಿಳಿಸಿದ್ದಾರೆ.

 ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರದಾಳಿ ನಡೆಸಿ ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿಪಡೆದ ಘಟನೆಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಬಾಲಕೋಟ್‌ನಲ್ಲಿದ್ದ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ದಾಳಿ ನಡೆಸಿದ್ದವು. ಮರುದಿನ ಭಾರತ ಮತ್ತು ಪಾಕಿಸ್ತಾನದ ಯುದ್ಧವಿಮಾನಗಳು ನಿಯಂತ್ರಣ ರೇಖೆಯ ಸಮೀಪ ವಾಯು ಸಮರದಲ್ಲಿ ತೊಡಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News