ಜಮ್ಮು-ಕಾಶ್ಮೀರ ಮೀಸಲಾತಿ ಕುರಿತ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2019-06-24 14:32 GMT

ಹೊಸದಿಲ್ಲಿ,ಜೂ.24: ಜಮ್ಮು-ಕಾಶ್ಮೀರ ಮೀಸಲಾತಿ ಕುರಿತು ಮಸೂದೆಯೊಂದನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದರಿಂದಾಗಿ ಜಮ್ಮು-ಕಾಶ್ಮೀರದ ಅಂತರರಾಷ್ಟ್ರೀಯ ಗಡಿ(ಐಬಿ)ಯಲ್ಲಿ ವಾಸವಿರುವವರು ನೇರ ನೇಮಕಾತಿ,ಭಡ್ತಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಒಸಿ)ಗುಂಟ ವಾಸವಿರುವವರಿಗೆ ಸಮನಾಗಿ ಮೀಸಲಾತಿ ಸೌಲಭ್ಯವನ್ನು ಪಡೆಯಲಿದ್ದಾರೆ.

ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ) ಮಸೂದೆ ಹಿಂದಿನ ಸರಕಾರವು ಹೊರಡಿಸಿದ್ದ ಅಧ್ಯಾದೇಶವನ್ನು ರದ್ದುಗೊಳಿಸಲಿದೆ.

ಗೃಹಸಚಿವ ಅಮಿತ್ ಶಾ ಅವರ ಪರವಾಗಿ ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು ಮಸೂದೆಯನ್ನು ಮಂಡಿಸಿದರು. ಈ ಸಂದರ್ಭ ಶಾ ಸದನದಲ್ಲಿ ಉಪಸ್ಥಿತರಿದ್ದರು.

  ಮಸೂದೆಯ ಮಂಡನೆಯನ್ನು ವಿರೋಧಿಸಲು ಕೆಲವು ಪ್ರತಿಪಕ್ಷ ಸದಸ್ಯರು ಮುಂದಾಗಿದ್ದರಾದರೂ ಸ್ಪೀಕರ್ ಓಂ ಬಿರ್ಲಾ ಅವರು ಅದಕ್ಕೆ ಅವಕಾಶ ನಿರಾಕರಿಸಿದರು.

ಜಮ್ಮು-ಕಾಶ್ಮೀರದ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶದ ನಿವಾಸಿಗಳು ಜಮ್ಮು-ಕಾಶ್ಮೀರ ಮೀಸಲಾತಿ ಕಾಯ್ದೆ,2004 ಮತ್ತು ನಿಯಮಗಳು,2005ರ ವ್ಯಾಪ್ತಿಗೊಳಪಟ್ಟಿರಲಿಲ್ಲ. ನೇರ ನೇಮಕಾತಿ,ಭಡ್ತಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶಕ್ಕೆ ಮೀಸಲಾತಿ ಸೌಲಭ್ಯ ಎಲ್‌ಒಸಿ ಆಸುಪಾಸಿನ ನಿವಾಸಿಗಳಿಗೆ ಮಾತ್ರ ಸೀಮಿತವಾಗಿತ್ತು.

 ಗಡಿಯಲ್ಲಿ ನಿರಂತರ ಉದ್ವಿಗ್ನತೆಯಿಂದಾಗಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೆ ವಾಸವಿರುವವರು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಗುರಿಯಾಗಿದ್ದಾರೆ. ಆಗಾಗ್ಗೆ ಗಡಿಯಾಚೆಯಿಂದ ಶೆಲ್‌ದಾಳಿಗಳಿಂದಾಗಿ ಈ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದು ಅನಿವಾರ್ಯವಾಗುತ್ತದೆ ಮತ್ತು ಸುದೀರ್ಘ ಅವಧಿಗೆ ಶಾಲಾಕಾಲೇಜುಗಳು ಮುಚ್ಚಲ್ಪಡುವುದರಿಂದ ಅವರ ಶಿಕ್ಷಣದ ಮೇಲೂ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News