ಎನ್‌ಐಎಗೆ ಇನ್ನಷ್ಟು ಶಕ್ತಿ ತುಂಬಲು ಎರಡು ಕಾನೂನುಗಳ ತಿದ್ದುಪಡಿಗಳಿಗೆ ಸಂಪುಟದ ಒಪ್ಪಿಗೆ

Update: 2019-06-24 14:38 GMT

ಹೊಸದಿಲ್ಲಿ,ಜೂ.24: ಭಾರತ ಮತ್ತು ವಿದೇಶಗಳಲ್ಲಿ ಭಯೋತ್ಪಾದನೆ ಪ್ರಕರಣಗಳ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಇನ್ನಷ್ಟು ಬಲ ನೀಡಲು ಎರಡು ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಪ್ರಸ್ತಾವನೆಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ಸೋಮವಾರ ತಿಳಿಸಿವೆ.

ಎನ್‌ಐಎ ಕಾಯ್ದೆ ಮತ್ತು ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆ(ಯುಎಪಿಎ)ಗೆ ತಿದ್ದುಪಡಿಗಳನ್ನು ತರಲು ಎರಡು ಪ್ರತ್ಯೇಕ ಮಸೂದೆಗಳನ್ನು ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಅವು ತಿಳಿಸಿದವು.

ಈ ತಿದ್ದುಪಡಿಗಳು ಸೈಬರ್ ಅಪರಾಧಗಳು ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳ ತನಿಖೆ ನಡೆಸಲೂ ಎನ್‌ಐಗೆ ಅವಕಾಶ ನೀಡಲಿವೆ.

ಯುಎಪಿಎದ ಅನುಸೂಚಿ 4ಕ್ಕೆ ತಿದ್ದುಪಡಿಯು ಭೀತಿವಾದದೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸಲು ಅವಕಾಶ ಕಲ್ಪಿಸಲಿದೆ. ಈಗ ಕೇವಲ ಸಂಸ್ಥೆಗಳನ್ನು ‘ಭಯೋತ್ಪಾದಕ ಸಂಸ್ಥೆಗಳು’ ಎಂದು ಘೋಷಿಸಲಾಗುತ್ತಿದೆ. ಸಾಗರೋತ್ತರ ಭಾರತೀಯರಿಗೆ ಪ್ರಾಕ್ಸಿ ಮತದಾನದ ಸೌಲಭ್ಯವನ್ನು ವಿಸ್ತರಿಸುವ ಮಸೂದೆಯನ್ನು ಮಂಡಿಸಲು ಪ್ರಸ್ತಾವನೆಯನ್ನು ಸೋಮವಾರ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಈ ಸೌಲಭ್ಯವೀಗ ಸೇನಾ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದೆ. ಹಾಲಿ ಸಾಗರೋತ್ತರ ಭಾರತೀಯರು ತಮ್ಮ ಹೆಸರು ನೋಂದಣಿಯಾಗಿರುವ ಮತಕ್ಷೇತ್ರಗಳಲ್ಲಿ ತಮ್ಮ ಮತಗಳನ್ನು ಚಲಾಯಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News