ಸ್ವಇಚ್ಛೆಯಿಂದ ಗುರುತಿನ ಪುರಾವೆಯಾಗಿ ಆಧಾರ್ ಬಳಕೆಗೆ ಅವಕಾಶ ನೀಡುವ ಮಸೂದೆ ಮಂಡನೆ

Update: 2019-06-24 14:49 GMT

ಹೊಸದಿಲ್ಲಿ,ಜೂ.24: ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಮೊಬೈಲ್ ಫೋನ್ ಸಂಪರ್ಕಗಳನ್ನು ಪಡೆದುಕೊಳ್ಳಲು ಸ್ವಇಚ್ಛೆಯಿಂದ ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸರಕಾರವು ಸೋಮವಾರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಮಂಡಿಸಿದೆ.

 ಮಸೂದೆಯು 2016ರ ಆಧಾರ ಕಾಯ್ದೆಯನ್ನು ತಿದ್ದುಪಡಿಗೊಳಿಸಲಿದೆ ಮತ್ತು ಮಾರ್ಚ್‌ನಲ್ಲಿ ಹೊರಡಿಸಿದ್ದ ಅಧ್ಯಾದೇಶದ ಬದಲಾಗಿ ಜಾರಿಗೆ ಬರಲಿದೆ. ನಿಯಮಗಳ ಉಲ್ಲಂಘನೆಗಳಿಗೆ ಕಠಿಣ ದಂಡನೆಗಳನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮಸೂದೆಯನ್ನು ವಿರೋಧಿಸಿದ ಆರ್‌ಎಸ್‌ಪಿ ಸದಸ್ಯ ಎನ್.ಕೆ.ಪ್ರೇಮಚಂದ್ರನ್ ಅವರು,ಇದು ಆಧಾರ್ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಗಂಭೀರ ಉಲ್ಲಂಘನೆಯಾಗಿದೆ. ಇದರಿಂದ ಖಾಸಗಿ ಸಂಸ್ಥೆಗಳಿಗೆ ಆಧಾರ ಮಾಹಿತಿಗಳು ದೊರೆಯುತ್ತವೆ ಮತ್ತು ಮೂಲಭೂತ ಹಕ್ಕುಗಳನ್ನು,ವಿಶೇಷವಾಗಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸಬಹುದು ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಅವರು,ಆಧಾರ್ ಸಿಂಧುವಾಗಿರುವ ಕಾನೂನು ಆಗಿದ್ದು ರಾಷ್ಟ್ರೀಯ ಹಿತಾಸಕ್ತಿಯನ್ನು ಅದು ಒಳಗೊಂಡಿದೆ ಮತ್ತು ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ. ಮಸೂದೆಯು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿದೆ ಮತ್ತು ಭಾರತದ ಜನರು ಆಧಾರ್ ಅನ್ನು ಒಪ್ಪಿಕೊಂಡಿದ್ದಾರೆ ಎಂದರು.

60 ಕೋಟಿಗೂ ಅಧಿಕ ಜನರು ಆಧಾರ್‌ನ ಮೂಲಕ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ ಮತ್ತು ಈಗ ಅದು ಕಡ್ಡಾಯವಲ್ಲ ಎಂದೂ ಅವರು ತಿಳಿಸಿದರು.

ಮಗುವು ತನಗೆ 18ನೇ ವರ್ಷ ಪ್ರಾಯವಾದಾಗ ಬಯೊಮೆಟ್ರಿಕ್ ಐಡಿ ಕಾರ್ಯಕ್ರಮದಿಂದ ಹೊರಗೆ ಬರುವ ಆಯ್ಕೆಯನ್ನು ನೀಡಲು ಉದ್ದೇಶಿಸಿರುವ ಮಸೂದೆಯು,ಆಧಾರ್ ಬಳಕೆಯ ನಿಯಮಗಳು ಮತ್ತು ಖಾಸಗಿತನದ ಉಲ್ಲಂಘನೆಗಾಗಿ ಕಠಿಣ ದಂಡನೆಗಳನ್ನು ಪ್ರಸ್ತಾಪಿಸಿದೆ. ಆಧಾರ್‌ನ್ನು ಜನಸ್ನೇಹಿಯಾಗಿಸುವುದು ಮಸೂದೆಯ ಉದ್ದೇಶವಾಗಿದೆ.

ಖಾಸಗಿ ಸಂಸ್ಥೆಗಳಿಂದ ಬಯೊಮೆಟ್ರಿಕ್ ಐಡೆಂಟಿಫೈಯರ್‌ನ ಬಳಕೆಗೆ ಸಂಬಂಧಿಸಿದ ಆಧಾರ ಕಾಯ್ದೆಯ ಕಲಂ 57ನ್ನು ಕೈಬಿಡಲೂ ಮಸೂದೆಯು ಉದ್ದೇಶಿಸಿದೆ.

ಆಧಾರ್ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಒಂದು ಕೋ.ರೂ.ವರೆಗೆ ದಂಡ ಮತ್ತು ನಿರಂತರ ಅನನುಸರಣೆ ಪ್ರಕರಣದಲ್ಲಿ ಪ್ರತಿದಿನ 10 ಲ.ರೂ.ವರೆಗೆ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸಂಸ್ಥೆಗಳಿಂದ ಆಧಾರ್ ಮಾಹಿತಿಯ ಅನಧಿಕೃತ ಬಳಕೆಗಾಗಿ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 10,000 ರೂ.ವರೆಗೆ ಅಥವಾ ಕಂಪನಿಯಾಗಿದ್ದರೆ ಒಂದು ಲ.ರೂ.ವರೆಗೆ ದಂಡವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಕೇಂದ್ರ ಮಾಹಿತಿ ಕೋಶಕ್ಕೆ ಕನ್ನ ಹಾಕಿದರೆ ದಂಡನೆಯನ್ನು ಈಗಿನ ಮೂರು ವರ್ಷಗಳ ಜೈಲುಶಿಕ್ಷೆಯಿಂದ 10 ವರ್ಷಗಳಿಗೆ ವಿಸ್ತರಿಸಲು ಮಸೂದೆಯು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News