“ಮುಸ್ಲಿಂ ಎಂಬ ಕಾರಣಕ್ಕೆ ಥಳಿಸಿ ಕಳ್ಳ ಎಂದರು”: ಮೃತ ತಬ್ರೇಝ್ ಕುಟುಂಬದ ಆರೋಪ

Update: 2019-06-24 14:49 GMT

ಜೆಮ್ಶೆದ್‌ಪುರ, ಜೂ. 24: ಇಲ್ಲಿನ ಸರೈಕೆಲಾ ಖರ್ಸ್ವಾನಂದ್‌ನಲ್ಲಿ ಸ್ಥಳೀಯರಿಂದ ಥಳಿತಕ್ಕೊಳಗಾಗಿ ಬಳಿಕ ಬಂಧಿತನಾದ 22 ವರ್ಷದ ಯುವಕ ರವಿವಾರ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕನನ್ನು ತಬ್ರೇಝ್ ಎಂದು ಗುರುತಿಸಲಾಗಿದೆ. ಆತನನ್ನು ರವಿವಾರ ಬೆಳಗ್ಗೆ ಸದಾರ್ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಅನಂತರ ಆತನನ್ನು ಜೆಮ್ಶೆದ್‌ಪುರದ ಟಾಟಾ ಮುಖ್ಯ ಆಸ್ಪತ್ರೆಯಲ್ಲಿ ದಾಖಲಿಸಲು ಶಿಫಾರಸು ಮಾಡಲಾಗಿತ್ತು.

 ಕೋಮು ಭಾವನೆಯಿಂದ ತಬ್ರೇಝ್ ಮೇಲೆ ಗುಂಪು ದಾಳಿ ನಡೆಸಿದೆ. ಆತ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಲಾಗಿದೆ ಎಂದು ತಬ್ರೇಝ್‌ನ ಕುಟುಂಬ ಆರೋಪಿಸಿದೆ.

''ಕೆಲವು ಸ್ಥಳೀಯರು ತಬ್ರೇಝ್‌ಗೆ ಥಳಿಸಿದರು ಹಾಗೂ ಅನಂತರ ಪೊಲೀಸರಿಗೆ ಹಸ್ತಾಂತರಿಸಿದರು. ಆತ ಕಳವುಗೈದಿದ್ದಾನೆ ಎಂದು ಶಂಕಿಸಿ ಥಳಿಸಿರುವುದು ಸುಳ್ಳು. ಆತ ಮುಸ್ಲಿಂ ಎಂಬ ಕಾರಣಕ್ಕೆ ಥಳಿಸಲಾಗಿದೆ. ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಘೋಷಣೆ ಕೂಗುವಂತೆ ಆತನನ್ನು ಮತ್ತೆ ಮತ್ತೆ ಬಲವಂತಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಆತನನ್ನು ಭೇಟಿಯಾಗಲು ನಮಗೆ ಅವಕಾಶ ನೀಡಿಲ್ಲ. ನಮ್ಮಲ್ಲಿ ಘಟನೆಯ ವೀಡಿಯೊ ಇದೆ. ಆರೋಪಿಗಳನ್ನು ಬಂಧಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ'' ಎಂದು ತಬ್ರೇಝ್‌ನ ಸಂಬಂಧಿಕ ಮಕ್ಸೂದ್ ಆಲಂ ಹೇಳಿದ್ದಾರೆ.

''ಈ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವು ಬಯಸುತ್ತೇವೆ'' ಎಂದು ತಬ್ರೇಝ್‌ನ ಇನ್ನೊಬ್ಬರು ಸಂಬಂಧಿಕರು ಹೇಳಿದ್ದಾರೆ.

ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಹಾಗೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಂಚಿ: ತಬ್ರೇಝ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಪೊಲೀಸರ ಕಡೆಯಿಂದಾದ ನಿರ್ಲಕ್ಷ್ಯದ ಬಗೆಗಿನ ಆಂತರಿಕ ತನಿಖೆ ನಡೆಯುತ್ತಿದೆ. ಈ ಹತ್ಯೆಯಲ್ಲಿ ಕಾರಾಗೃಹದ ಆಡಳಿತದ ಪಾತ್ರದ ಬಗ್ಗೆ ಜಿಲ್ಲಾಧಿಕಾರಿ ಮಟ್ಟದ ತನಿಖೆ ನಡೆಸಲಾಗುವುದು ಎಂದು ಸರೈಕೆಲಾ ಖಾರ್ಸವಾನ್‌ನ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News