ಕೈಗಳನ್ನು ಕಡಿದುಕೊಳ್ಳಲು ಮುಂದಾದ ಬಾಂಗ್ಲಾದ ‘ಮರ ಮನುಷ್ಯ’

Update: 2019-06-24 16:44 GMT

ಢಾಕಾ, ಜೂ. 24: ದೇಹದಲ್ಲಿ ಮರದ ತೊಗಟೆಯಂಥ ರಚನೆಗಳು ಬೆಳೆಯುತ್ತಿರುವುದಕ್ಕಾಗಿ ‘ಮರ ಮನುಷ್ಯ’ ಎಂಬುದಾಗಿ ಕರೆಯಲ್ಪಡುವ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು, ಅಸಹನೀಯ ವೇದನೆಯಿಂದ ಮುಕ್ತಿ ಪಡೆಯುವುದಕ್ಕಾಗಿ ಕೈಗಳನ್ನೇ ತೆಗೆದುಹಾಕಲು ಮುಂದಾಗಿದ್ದಾರೆ.

ಕೈಗಳು ಮತ್ತು ಪಾದಗಳಲ್ಲಿ ಬೆಳೆಯುತ್ತಿರುವ ತೊಗಟೆಯಂಥ ರಚನೆಗಳನ್ನು ತೆಗೆದುಹಾಕುವುದಕ್ಕಾಗಿ ಅಬುಲ್ ಬಜಂದರ್ 2016ರಿಂದ 25 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಅಪರೂಪದ ಸಿಂಡ್ರೋಮ್‌ನಿಂದ ಉಂಟಾಗುವ ಈ ವಿಚಿತ್ರ ಕಾಯಿಲೆಯನ್ನು ಮಣಿಸಲು ಶಕ್ತರಾಗಿದ್ದೇವೆ ಎಂಬುದಾಗಿ ವೈದ್ಯರು ಭಾವಿಸುತ್ತಿರುವಂತೆಯೇ ಈ ರೋಗ ಮರುಕಳಿಸಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ವರ್ಷದ ಮೇ ತಿಂಗಳಲ್ಲಿ ಢಾಕಾದ ಆಸ್ಪತ್ರೆಯೊಂದರಿಂದ ಬಜಂದರ್ ಪರಾರಿಯಾಗಿದ್ದರು.

28 ವರ್ಷದ ಬಜಂದರ್ ಒಂದು ಮಗುವಿನ ತಂದೆಯಾಗಿದ್ದಾರೆ.

ಅವರ ಪರಿಸ್ಥಿತಿ ಹದಗೆಡುತ್ತಿರುವಂತೆಯೇ, ಈ ವರ್ಷದ ಜನವರಿಯಲ್ಲಿ ಅವರನ್ನು ಆಸ್ಪತ್ರೆಗೆ ಮತ್ತೆ ಸೇರಿಸಲಾಗಿತ್ತು. ಕೆಲವು ತೊಗಟೆಯಂಥ ರಚನೆಗಳು ಹಲವು ಇಂಚು ಉದ್ದ ಬೆಳೆದಿದ್ದವು.

  ‘‘ನಾನು ಈ ವೇದನೆಯನ್ನು ಇನ್ನೆಂದಿಗೂ ಸಹಿಸಲಾರೆ. ರಾತ್ರಿಯಲ್ಲಿ ನನಗೆ ನಿದ್ದೆ ಮಾಡಲೂ ಆಗುತ್ತಿಲ್ಲ. ನನ್ನ ಕೈಗಳನ್ನು ಕಡಿಯುವಂತೆ ನಾನು ವೈದ್ಯರನ್ನು ಕೇಳಿದ್ದೇನೆ. ಇದರಿಂದ ನನಗೆ ಸ್ವಲ್ಪವಾದರೂ ನೆಮ್ಮದಿ ಸಿಗಬಹುದು’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.

ಬಜಂದರ್ ‘ಟ್ರೀ ಮ್ಯಾನ್ ಸಿಂಡ್ರೋಮ್’ ಎಂಬ ಅಪರೂಪದ ವಂಶವಾಹಿ ದೋಷದಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News