ಉದ್ಯೋಗವಿಲ್ಲದೆ ಇರುವೆ ಮೊಟ್ಟೆ ತಿಂದು ಬದುಕುತ್ತಿದ್ದೇವೆ: ಪದ್ಮಶ್ರೀ ಪುರಸ್ಕೃತ ಕೃಷಿಕ ದೈತಾರಿ ನಾಯಕ್

Update: 2019-06-24 17:04 GMT
Photo: KalingaTV

ಭುವನೇಶ್ವರ, ಜೂ. 24: ಪದ್ಮಶ್ರೀ ಪ್ರಶಸ್ತಿ ತನಗೆ ಬದುಕಲು ಅಡ್ಡಿ ಉಂಟು ಮಾಡುತ್ತಿದೆ. ಆದುದರಿಂದ ಪ್ರಶಸ್ತಿ ಹಿಂದಿರುಗಿಸಲು ಬಯುಸುತ್ತೇನೆ ಎಂದು ಒಡಿಶಾದಲ್ಲಿ ಪರ್ವತಕ್ಕೆ 3 ಕಿ.ಮೀ. ಸುರಂಗ ಕೊರೆದು ಕೃಷಿಗೆ ನೀರು ಒದಗಿಸಿದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಬುಡಕಟ್ಟು ಕೃಷಿಕ ದೈತಾರಿ ನಾಯಕ್ ಹೇಳಿದ್ದಾರೆ.

ಗೋನಾಸಿಕ ಪರ್ವತಕ್ಕೆ ಸುರಂಗ ಕೊರೆದು ನೀರು ಹರಿಸಿದ ಸಾಧನೆಗಾಗಿ ಒಡಿಶಾದ ಕ್ಯೋಂಜರ್ ಜಿಲ್ಲೆಯ ತಲಬಿಟರಾನಿ ಗ್ರಾಮದ 75 ವರ್ಷದ ದೈತಾರಿ ನಾಯಕ್ ಅವರಿಗೆ ಈ ವರ್ಷ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಾಯಕ್ ಅವರು ಗುದ್ದಲಿ ಮತ್ತು ಹಾರೆ ಬಳಿಸಿ 2010ರಿಂದ 2013ರವರೆಗೆ ಏಕಾಂಗಿಯಾಗಿ ಪರ್ವತಕ್ಕೆ ಸುರಂಗ ಕೊರೆದಿದ್ದರು. ಇದರಿಂದ ಈ ಪ್ರದೇಶದ 100 ಎಕರೆ ಪ್ರದೇಶಕ್ಕೆ ನೀರಾವರಿ ದೊರಕಿತ್ತು.

ಪದ್ಮಶ್ರೀ ಭಾರತದ ಅತ್ಯುಚ್ಚ ನಾಗರಿಕ ಪ್ರಶಸ್ತಿ. ಆದರೆ, ಈಗ ಇದೇ ಪ್ರಶಸ್ತಿ ನಾಯಕ್ ಅವರ ಬದುಕಿಗೆ ಉರುಳಾಗಿದೆ.

 ‘‘ಪದ್ಮ ಶ್ರೀ ಪ್ರಶಸ್ತಿ ನನಗೆ ಯಾವುದೇ ರೀತಿಯ ಪ್ರಯೋಜನ ನೀಡಿಲ್ಲ. ಈ ಹಿಂದೆ ನಾನು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಪದ್ಮಶ್ರೀ ಪ್ರಶಸ್ತಿ ಪಡೆದಿರುವುದರಿಂದ ಜನರು ನನಗೆ ಕೆಲಸ ನೀಡುತ್ತಿಲ್ಲ. ಕೂಲಿ ಕೆಲಸ ನನ್ನ ಗೌರವಕ್ಕೆ ಧಕ್ಕೆ ಎಂದು ಅವರು ಭಾವಿಸಿದ್ದರು. ನಾವು ಈಗ ಇರುವೆ ಮೊಟ್ಟೆಗಳನ್ನು ತಿಂದು ಜೀವಿಸುತ್ತಿದ್ದೇವೆ’’ ಎಂದು ನಾಯಕ್ ಹೇಳಿದ್ದಾರೆ.

 ‘‘ನಾನೀಗ ಕುಟುಂಬ ನಡೆಸಲು ಅಂಬಾ ಸಾಧಾ (ಮಾವಿನ ಪಪ್ಪಡ) ವನ್ನು ಮಾರಾಟ ಮಾಡುತ್ತೇನೆ. ಪ್ರಶಸ್ತಿಯಿಂದ ನನಗೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಪ್ರಶಸ್ತಿ ಹಿಂದಿರುಗಿಸಲು ಬಯಸುತ್ತೇನೆ. ಅನಂತರ ನನಗೆ ಕೆಲವು ಕೆಲಸ ಸಿಗಬಹುದು’’ ಎಂದು ನಾಯಕ್ ತಿಳಿಸಿದ್ದಾರೆ.

‘‘ನಾನು ಪ್ರತಿ ತಿಂಗಳು 700 ರೂಪಾಯಿ ಪಿಂಚಣಿ ಪಡೆಯುತ್ತಿದ್ದೇನೆ. ಇದರಿಂದ ನನ್ನ ಕುಟುಂಬ ನಡೆಸಲು ಸಾಧ್ಯವಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಇಂದಿರಾ ಆವಾಸ್ ಯೋಜನೆಯ ಮನೆ ನೀಡಲಾಗಿತ್ತು. ಆದು ಪೂರ್ಣಗೊಂಡಿಲ್ಲ. ಆದುದರಿಂದ ನಾನು ಹಳೆಯ ಮನೆಯಲ್ಲೇ ಇದ್ದೇನೆ’’ ಎಂದು ದೈತಾರಿ ನಾಯಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News