ಡಿಆರ್‌ಡಿಒ ವಿಜ್ಞಾನಿಯಿಂದ ತೊನ್ನುರೋಗದ ಚಿಕಿತ್ಸೆಗೆ ಗಿಡಮೂಲಿಕೆ ಔಷಧಿ ಅಭಿವೃದ್ಧಿ

Update: 2019-06-24 17:51 GMT

ಹೊಸದಿಲ್ಲಿ,ಜೂ.24: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಹಿರಿಯ ವಿಜ್ಞಾನಿ ಹೇಮಂತ ಪಾಂಡೆ ಅವರು ಗಿಡಮೂಲಿಕೆಗಳಿಂದ ಸಿದ್ಧಗೊಳಿಸಿರುವ ನೂತನ ಔಷಧಿಯು ತೊನ್ನುರೋಗದಿಂದ ಬಳಲುತ್ತಿರುವವರಿಗೆ ಹೊಸ ಆಶಾಕಿರಣವಾಗಿದೆ.

‘ಲ್ಯುಕೊಸ್ಕಿನ್ ’ ಎಂದು ಹೆಸರಿಸಲಾಗಿರುವ ಈ ಔಷಧಿಯ ಉಪಯುಕ್ತತೆಯನ್ನು ಗುರುತಿಸಿರುವ ಕೇಂದ್ರ ಸರಕಾರವು ಕಳೆದ ತಿಂಗಳು ಪಾಂಡೆ ಅವರಿಗೆ ಪ್ರತಿಷ್ಠಿತ ‘ ವಿಜ್ಞಾನ ಪ್ರಶಸ್ತಿ ’ಯನ್ನು ಪ್ರದಾನಿಸಿ ಗೌರವಿಸಿದೆ.

ಸ್ವರಕ್ಷಿತ ರೋಗವಾಗಿರುವ ತೊನ್ನು ಶರೀರದಲ್ಲಿ ಬಿಳಿಯ ಕಲೆಗಳನ್ನುಂಟು ಮಾಡುವ ಮೂಲಕ ವ್ಯಕ್ತಿಯ ಜೀವನವನ್ನೇ ಬದಲಿಸುತ್ತದೆ. ಈ ರೋಗಕ್ಕೆ ಗುರಿಯಾಗಿರುವ ಹೆಚ್ಚಿನವರು ಸಮಾಜದಲ್ಲಿ ಕೀಳರಿಮೆ ಮತ್ತು ತೀವ್ರ ಖಿನ್ನತೆಯನ್ನು ಅನುಭವಿಸುತ್ತಿರುವುದು ಪಾಂಡೆಯವರಿಗೆ ಲ್ಯುಕೊಸ್ಕಿನ್‌ನ ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಗೊಳಿಸಲು ಪ್ರೇರಣೆಯಾಗಿತ್ತು.

ಜೂನ್ 25ನ್ನು ಅಂತರಾಷ್ಟ್ರೀಯ ತೊನ್ನು ದಿನವನ್ನಾಗಿ ಆಚರಿಸಲಾಗುತ್ತದೆ.

 ಅಲೋಪತಿ,ಶಸ್ತ್ರಚಿಕಿತ್ಸೆ ಸೇರಿದಂತೆ ತೊನ್ನಿಗೆ ವಿವಿಧ ಚಿಕಿತ್ಸೆಗಳು ಲಭ್ಯವಿವೆ,ಆದರೆ ಈ ಪೈಕಿ ಯಾವುದೇ ಚಿಕಿತ್ಸೆ ತೃಪ್ತಿಕರವಾದ ಫಲಿತಾಂಶಗಳನ್ನು ನೀಡಿಲ್ಲ ಎಂದು ಪಿತೋಡಗಡದಲ್ಲಿಯ ಡಿಆರ್‌ಡಿಒದ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಬಯೊ-ಎನರ್ಜಿಯಲ್ಲಿ ಮೂಲಿಕೆ ಔಷಧಿ ವಿಭಾಗದ ಮುಖ್ಯಸ್ಥರಾಗಿರುವ ಪಾಂಡೆ ಹೇಳಿದರು. ಸದ್ಯ ಲ್ಯುಕೊಸ್ಕಿನ್ ಅನ್ನು ದಿಲ್ಲಿಯ ಎಐಎಂಐಎಲ್ ಫಾರ್ಮಾ ಲಿ. ತಯಾರಿಸಿ ಮಾರಾಟ ಮಾಡುತ್ತಿದೆ. ಅದು ಮುಲಾಮು ಮತ್ತು ಸಿರಪ್ ರೂಪದಲ್ಲಿ ದೊರೆಯುತ್ತಿದೆ. ಸುಧಾರಿತ ಆವೃತ್ತಿಯು ಶೀಘ್ರವೇ ಮಾರುಕಟ್ಟೆಗೆ ಬರಲಿದೆ.

2015ರಲ್ಲಿ ಪಾಂಡೆ ಅಗ್ರಿ ಇನೋವೇಷನ್ ಪ್ರಶಸ್ತಿಯನ್ನು ಪಡೆಯಲು ಲ್ಯುಕೊಸ್ಕಿನ್ ನೆರವಾಗಿತ್ತು.

ಲ್ಯುಕೊಸ್ಕಿನ್ ಏಳು ಗಿಡಮೂಲಿಕೆಗಳ ಸತ್ವಗಳನ್ನು ಒಳಗೊಂಡಿದೆ. ಅದರ ಸಿರಪ್ ಹೊಸದಾಗಿ ಕಲೆಗಳು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ ಎಂದು ಆಯುರ್ವೇದ ತಜ್ಞೆ ನಿತಿಕಾ ಕೊಹ್ಲಿ ತಿಳಿಸಿದರು.

ಅಂದ ಹಾಗೆ ತೊನ್ನು ಸಾಂಕ್ರಾಮಿಕವಲ್ಲ,ಮಾರಣಾಂತಿಕವೂ ಅಲ್ಲ. ಆದರೆ ಸಾಮಾಜಿಕವಾಗಿ ಕೀಳರಿಮೆಯನ್ನು ಮೂಡಿಸುತ್ತದೆ ಎನ್ನುವುದು ಸುಳ್ಳಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News