ಜೂ.25: ಸಿಐಟಿಯು ಸುವರ್ಣ ಮಹೋತ್ಸವ ಸಮಿತಿ ರಚನಾ ಸಭೆ

Update: 2019-06-24 18:30 GMT

ಮಂಗಳೂರು, ಜೂ.24: ದೇಶದ ಕಾರ್ಮಿಕ ಚಳವಳಿಗೆ ಶತಮಾನೋತ್ಸವದ ಸಂಭ್ರಮ ಹಾಗೂ ಕಾರ್ಮಿಕ ಚಳವಳಿಯ ಧ್ರುವತಾರೆ ಸಿಐಟಿಯುಗೆ ಸುವರ್ಣ ಮಹೋತ್ಸವ ಸಂಭ್ರಮವನ್ನು ದ.ಕ.ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲು ಜಿಲ್ಲಾಮಟ್ಟದ ಸುವರ್ಣ ಮಹೋತ್ಸವ ಆಚರಣಾ ಸಮಿತಿ ರಚನಾ ಸಭೆಯು ಜೂ.25ರಂದು ಸಂಜೆ 5 ಗಂಟೆಗೆ ನಗರದ ಮಿನಿವಿಧಾನಸೌಧದ ಆವರಣದ ‘ಡಿ ಗ್ರೂಪ್’ ನೌಕರರ ಸಂಘದ ಕಚೇರಿಯಲ್ಲಿ ನಡೆಯಲಿದೆ.

ಸ್ವಾತಂತ್ರ್ಯ ಪೂರ್ವದಿಂದಲೇ ಜಿಲ್ಲೆಯಲ್ಲಿ ಕಾರ್ಮಿಕ ಚಳವಳಿಯು ಭಾರೀ ಮಹತ್ವ ಪಡೆದಿದ್ದು, ಅಂದಿನಿಂದ ಇಂದಿನವರೆಗೆ ವಿವಿಧ ಕಾರ್ಮಿಕರ ಅನೇಕ ಸಮರಧೀರ ಹೋರಾಟಗಳು ನಡೆದಿವೆ. ಅವೆಲ್ಲವನ್ನು ಮೆಲುಕು ಹಾಕುವ ಸಲುವಾಗಿ ‘ಕಾರ್ಮಿಕ ಚಳವಳಿಯ ಇತಿಹಾಸ ಹಾಗೂ ಮುಂದಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ವಿಷಯ ಮಂಡಿಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ವಹಿಸಲಿದ್ದಾರೆ. ಸಿಐಟಿಯು ಕಾರ್ಯಕರ್ತರು, ಕಾರ್ಮಿಕ ಬಂಧುಗಳು, ಮಧ್ಯಮ ವರ್ಗದ ನೌಕರರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮುಂದಿನ ದಿನಗಳಲ್ಲಿ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News