ಬಸ್ ನಿರ್ವಾಹಕನಿಂದ ನಿಂದನೆ ಆರೋಪ: ವಿದ್ಯಾರ್ಥಿನಿಯಿಂದ ಪೊಲೀಸ್, ಕೆಎಸ್ಸಾರ್ಟಿಸಿ ಡಿಎಂಗೆ ದೂರು

Update: 2019-06-24 18:40 GMT

ಪುತ್ತೂರು, ಜೂ.24: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೋರ್ವರಿಗೆ ಬಸ್ ಪಾಸ್ ವಿಚಾರದಲ್ಲಿ ಸರಕಾರಿ ಬಸ್ ನಿರ್ವಾಹಕ ತಗಾದೆ ತೆಗೆದು ಸಾರ್ವಜನಿಕವಾಗಿ ನಿಂದಿಸಿ ಅವಮಾನ ಮಾಡಿರುವ ಬಗ್ಗೆ ಪೊಲೀಸರಿಗೆ ಹಾಗೂ ಕೆಎಸ್ಸಾರ್ಟಿಸಿ ಡಿಎಂಗೆ ದೂರು ನೀಡಲಾಗಿದೆ.

ಪುತ್ತೂರು ತಾಲೂಕಿನ ಕೂರ್ನಡ್ಕ ನಿವಾಸಿ ಕೊಣಾಜೆಯ ಮಂಗಳೂರು ವಿವಿಯ ಎಂಸಿಎ ವಿದ್ಯಾರ್ಥಿನಿ ಫಾತಿಮತ್ ಸಮ್ರೀನ ಈ ಬಗ್ಗೆ ದೂರು ನೀಡಿದ್ದಾರೆ.

ನಾನು ಕೊಣಾಜೆಯ ಮಂಗಳೂರು ವಿವಿಯ ವಿದ್ಯಾರ್ಥಿನಿಯಾಗಿದ್ದು ಮೆಲ್ಕಾರ್‌ನಿಂದ ಕೆಎಸ್ಸಾರ್ಟಿಸಿ ಬಸ್ ಕೆ.ಎ.21 ಎಫ್ 0077 ನೋಂದಣಿ ಬಸ್ಸಿನಲ್ಲಿ ಕೊಣಾಜೆಗೆ ಪ್ರಯಾಣಿಸಲು ಕೆಎಸ್ಸಾರ್ಟಿಸಿ ಮಂಗಳೂರು ಘಟಕವು ಕೊಡಮಾಡಿದ್ದ ಪಾಸ್ ‘ಪುತ್ತೂರು-ಬಿ.ಸಿ.ರೋಡ್-ಪಂಪ್‌ವೆಲ್-ಕೊಣಾಜೆ ಮಾರ್ಗ ನಮೂದಿಸಿದಂತೆ ಜೂ.22ರಂದು ಪೂರ್ವಾಹ್ನ ಪ್ರಯಾಣಿಸುತ್ತಿದ್ದ ಸಂದಭರ್ದಲ್ಲಿ ನಿರ್ವಾಹಕ ನನ್ನ ಪಾಸ್ ನೋಡಿ ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಇದು ನೀನು ಮಾಡಿದ ಫೋರ್ಜರಿ ಪಾಸ್, ನಿಮ್ಮವರು ಮಾಡುವುದು ಹೀಗೇನೆ ಎಂದು ಹೀಯಾಳಿಸಿ, ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ತೋರಿಸುತ್ತಾ ನನ್ನನ್ನು ಕಳ್ಳಿಯಂತೆ ಅಸಹಿಷ್ಣುತೆಯಿಂದ ವರ್ತಿಸಿದ್ದಾರೆ. ಅಲ್ಲದೆ ನನ್ನ ಪಾಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ಮಾನಹಾನಿಕಾರ ವರ್ತನೆಯಿಂದ ನಾನು ಮಾನಸಿಕವಾಗಿ ನೊಂದಿದ್ದು, ಮುಂದೆ ನನ್ನ ವಿದ್ಯಾಭ್ಯಾಸಕ್ಕಾಗಿ ದಿನವೂ ಪ್ರಯಾಣಿಸುತ್ತಿರುವ ಇದೇ ಮಾರ್ಗದ ಬಸ್ಸಿನಲ್ಲಿ ಪ್ರಯಾಣಿಸಲು, ಇತರ ಪ್ರಯಾಣಿಕರ ಮುಂದೆ ನಾಚಿಕೆ, ಭಯವಾಗುತ್ತಿದ್ದು, ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಾಧ್ಯವಾಗಿದೆ. ಒಬ್ಬ ವಿದ್ಯಾರ್ಥಿನಿಯಾದ ನನ್ನೊಂದಿಗೆ ಸಾರ್ವಜನಿಕವಾಗಿ ಅತ್ಯಂತ ನಿಕೃಷ್ಟವಾಗಿ ವರ್ತಿಸಿದ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ಹಾಗೂ ಕೆಎಸ್ಸಾರ್ಟಿಸಿ ಡಿಎಂ ಅವರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News