‘ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ’ ಚಿಂತನ-ಮಂಥನ ಕಾರ್ಯಕ್ರಮ

Update: 2019-06-24 18:42 GMT

ಮಂಗಳೂರು, ಜೂ.24: ಪೋಷಕರು, ಶಿಕ್ಷಕರು ಯಾವ ಮೇಲ್ಪಂಕ್ತಿಯನ್ನು ಮಕ್ಕಳಿಗೆ ಹಾಕಿ ಕೊಡುತ್ತಾರೋ ಅದೇ ಅವರ ಜೀವನದಲ್ಲಿ ಮೌಲ್ಯಗಳ ಸ್ಥಾಪನೆಗೆ ಕಾರಣೀಭೂತವಾಗುತ್ತದೆ ಎಂದು ಬೆಂಗಳೂರಿನ ಬಿಎಸಿಸಿಇ ಸಂಸ್ಥೆಯ ನಿರ್ದೇಶಕ ಸ್ವಾಮಿ ಶರದ್ ವಿಹಾರಿ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಬೆಸೆಂಟ್ ಪ್ರೌಢಶಾಲೆ, ವಿಶ್ವ ಹಿಂದೂ ಪರಿಷತ್‌ನ ಮಣ್ಣಗುಡ್ಡೆ ಖಂಡ ಸಮಿತಿಗಳಿಂದ ಮಂಗಳೂರು ನಗರದ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ’ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವ್ಯಕ್ತಿತ್ವ ವಿಕಸನ ಎಂದರೆ ಕೇವಲ ಅಂಕ ಪ್ರೇರಿತವಲ್ಲ, ಅದು ಗುಣ ನಿರ್ಮಾಣ ಆಗಿರಬೇಕು. ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳೇ ದೇಶದ ಆಸ್ತಿಯಾಗಬಲ್ಲರು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಬೆಸೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಕೆ.ದೇವಾನಂದ ಪೈ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್‌ನ ಕುಮಾರಸ್ವಾಮಿ ಕೊಕ್ಕಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯ ಸಂಚಾಲಕ ಬೈಕಾಡಿ ಜನಾರ್ದನ ಆಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿ ಮತ್ತು ರಾಜೇಶ್ವರಿ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕಾ ಕೆ.ಎ. ಸ್ವಾಗತಿಸಿದರು. ಅಶೋಕ್ ಎಸ್. ಲಮಾಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News