ಅದಾನಿ ಫೌಂಡೇಶನ್‍ನಿಂದ ಶಿಶುಮಂದಿರ ನಿರ್ಮಾಣಕ್ಕೆ ರೂ.25 ಲಕ್ಷ ದೇಣಿಗೆ

Update: 2019-06-24 18:46 GMT

ಮೂಡುಬಿದಿರೆ: ಸೇವಾಂಜಲಿ ಎಜ್ಯುಕೇಶನಲ್ ಟ್ರಸ್ಟ್ ಹಾಗೂ ಪ್ರೇರಣಾ ಸೇವಾ ಟ್ರಸ್ಟ್‍ನ ವತಿಯಿಂದ ಕಡಲಕೆರೆಯಲ್ಲಿ ನಿರ್ಮಾಣಗೊಳ್ಳಲಿರುವ ಶಿಶುಮಂದಿರಕ್ಕೆ ಉಡುಪಿ ಪವರ್ ಕಾಪೋರೇಶನ್‍ನ ಅದಾನಿ ಫೌಂಡೇಶನ್‍ನಿಂದ 25 ಲಕ್ಷ ರೂಗಳ ದೇಣಿಗೆ ನೀಡಿದ್ದು ಅದಾನಿ ಯುಪಿಸಿಎಲ್‍ನ ಅಧ್ಯಕ್ಷ ಕಿಶೋರ್ ಆಳ್ವ 25 ಲಕ್ಷದ ಡಿಡಿಯನ್ನು ಸೇವಾಂಜಲಿ ಟ್ರಸ್ಟ್‍ನ ಸಂಚಾಲಕ ವಾಸುದೇವ ಭಟ್ ಅವರಿಗೆ ಸೋಮವಾರ ಹಸ್ತಾಂತರಿಸಿದರು.

ಶಾಸಕರ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಡಿಡಿ ಹಸ್ತಾಂತರಿಸಿ ಮಾತನಾಡಿದ ಕಿಶೋರ್ ಆಳ್ವ, ರಾಷ್ಟ್ರೀಯತೆಯ ಚಿಂತನೆಯನ್ನು ಹೊಂದಿರುವ ಈ ಶಿಶುಮಂದಿರ, ಶಾಲೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. ಅದಾನಿ ಕಾಪು ಪರಿಸರದಲ್ಲಿ 150 ಕನ್ನಡ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಎಳವೆಯಲ್ಲಿ ಮನೆಯಲ್ಲಿ, ಬಳಿಕ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಲಭಿಸಿದರೆ ಅವರು ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯ. ಈ ಸಂಸ್ಥೆಯು ಪುತ್ತೂರಿನ ವಿವೇಕಾನಂದ, ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರದಂತೆ ಬೆಳೆಯಲಿ ಎಂದು ಆಶಿಸಿದರು. 

ಸೇವಾಂಜಲಿ ಎಜುಕೇಶನ್ ಸೊಸೈಟಿಯ ಸಂಚಾಲಕ ವಾಸುದೇವ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡುಬಿದಿರೆ ಸಂಘಚಾಲಕ ವಿವೇಕಾನಂದ ಕಾಮತ್ ಉಪಸ್ಥಿತರಿದ್ದರು. ವಿಹಿಂಪ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News