ನಾವೂರು: ಬಾವಿಯಲ್ಲಿ ಚಿರತೆ ಪ್ರತ್ಯಕ್ಷ!

Update: 2019-06-25 13:56 GMT

ಬೆಳ್ತಂಗಡಿ: ನಾವೂರು ಸಮೀಪದ ಕನ್ಯಾಡಿ ಗ್ರಾಮದ ಪಾದೆ ಎಂಬಲ್ಲಿ ಮೂವತ್ತು ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಸಾರ್ವಜನಿಕರ ಸಹಾಯದೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿ, ಪಿಲಿಕುಳಗೆ ಕೊಂಡೊಯ್ದಿದ್ದಾರೆ. 

ಪಾದೆ ನಿವಾಸಿ ಗಂಗಯ್ಯ ಗೌಡ ಎಂಬವರ  ಮನೆಯ ಮುಂಭಾಗದಲ್ಲಿರುವ ಮೂವತ್ತು ಆಡಿ ಆಳವಿರುವ ಬಾವಿಗೆ ಚಿರತೆ ಬಿದ್ದಿರುವುದು ಮಂಗಳವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದೆ. ತಕ್ಷಣ ನಡ ಗ್ರಾಪಂ ಸದಸ್ಯ ಪ್ರವೀಣ ಎಂಬವರಿಗೆ ಪೋನಾಯಿಸಿ ಮನೆಯವರು ಮಾಹಿತಿ ನೀಡಿದ್ದಾರೆ. 

ಚಿರತೆ ಬಾವಿಗೆ ಬಿದ್ದಿರುವ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ತಂದ ಸ್ಥಳಕ್ಕೆ ಆಗಮಿಸಿ, ಚಿರತೆಯನ್ನು ಮೇಲಕ್ಕೆತ್ತುವ ಕಾರ್ಯಕ್ಕೆ ಸನ್ನದ್ಧವಾಯಿತು. ಜನವಸತಿ ಪ್ರದೇಶವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬಾವಿಯ ಮೇಲ್ಭಾಗಕ್ಕೆ ಬಲೆಯನ್ನು ಹಾಕಲಾಯಿತು. ಮಂಗಳೂರಿನಿಂದ ಬೋನ್ ತರಿಸಿ, ಬಾವಿಯ ಪಕ್ಕದಲ್ಲಿರಿಸಿ, ಏಣಿಯನ್ನು ಬಾವಿಗೆ ಇಳಿಸಲಾಯಿತು. ಏಣಿಯ ಮೂಲಕ ಬಾವಿಯಿಂದ ಮೇಲಕ್ಕೆ ಬಂದ ಚಿರತೆ ಬೋನಿನೊಳಗೆ ಬಂಧಿಯಾಯಿತು.  

ಚಿರತೆ ಬಾವಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ನೂರಾರು ಸಮಖ್ಯೆಯಲ್ಲಿ ಜಮಾಯಿಸಿದ್ದರು. ಸುತ್ತಮುತ್ತಲು ಮನೆಗಳಿದ್ದು ಇಲ್ಲಿನ ಜನರು ಚಿರತೆಯಿಂದಾಗಿ ಭಯಭೀತಗೊಂಡಿದ್ದರು. ಸಾರ್ವಜನಿಕರ ಸಹಾಯದಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. 

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ನೇತೃತ್ವದಲ್ಲಿ ವಲಯ ಉಪಅರಣ್ಯಾಧಿಕಾರಿ ರಾಜೇಶ್, ರವೀಂದ್ರ ಅಂಕಲಗಿ, ವಿನೋದ್, ಉಲ್ಲಾಸ್, ರವೀಂದ್ರ ನಾಯಕ್, ಅರಣ್ಯರಕ್ಷಕರಾದ  ರಾಘವೇಂದ್ರ ಪ್ರಸಾದ್, ನಿರ್ಮಲ್, ಆನಂದ್ ಮೋಹಿತ್, ಸುಭಾಶ್, ವನ್ಯಜೀವಿ ವಿಭಾಗದ ವಲಯ ಉಪಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕ ಅರುಣ್ ಹಾಗೂ ಸ್ಥಳೀಯರು ಸಹಕರಿಸಿದರು.
ಸುರಕ್ಷಿತವಾಗಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮೇಲಕ್ಕೆತ್ತಲಾಗಿದೆ. ಬಾವಿಗೆ ಬಿದ್ದ ಸಂದರ್ಭ ಗಾಯಗೊಂಡಿದ್ದಲ್ಲಿ ಅದಕ್ಕೆ ಚಿಕಿತ್ಸೆ ನೀಡಲು ಪಿಲಿಕುಳಕ್ಕೆ ಕರೆದೊಯ್ಯಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News