ಸಂಘ ಪರಿವಾರ ಪ್ರಾಯೋಜಿತ ಗುಂಪು ಹತ್ಯೆಗಳ ಹೆಚ್ಚಳ: ಪಿಎಫ್‌ಐ ಕಳವಳ

Update: 2019-06-25 06:40 GMT

ಮಂಗಳೂರು, ಜೂ.25: ನೂತನ ಬಿಜೆಪಿ ಸರ್ಕಾರದ ಅವಧಿಯ ಆರಂಭದಲ್ಲಿಯೇ ದೇಶದ ವಿವಿಧ ರಾಜ್ಯಗಳಲ್ಲಿ ಮುಸ್ಲಿಮ್ ವಿರೋಧಿ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.)ದ ಅಧ್ಯಕ್ಷ ಇ.ಅಬೂಬಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಅಲ್ಪಸಂಖ್ಯಾತರನ್ನು ಭಯಮುಕ್ತಗೊಳಿಸುವುದು ಮತ್ತು ಅವರ ವಿಶ್ವಾಸ ಗಳಿಸುವುದಾಗಿ ಪ್ರಧಾನಿಯ ಭರವಸೆಯ ಹೊರತಾಗಿಯೂ, ದೇಶದಲ್ಲಿ ಸಂಘ ಪರವಾರ ನಡೆಸುವ ಗುಂಪು ಹತ್ಯೆಗಳು ಬಹಳಷ್ಟು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಬಿಜೆಪಿಯ ಭರ್ಜರಿ ಗೆಲುವಿನ ನಂತರ ಮುಸ್ಲಿಮ್ ಪ್ರಯಾಣಿಕರ ಮತ್ತು ಕಾರ್ಮಿಕರ ಮೇಲೆ ನಡೆಂುುತ್ತಿರುವ ದಾಳಿ, ಹಿಂಸೆ ಮತ್ತು ಹತ್ಯೆಯಂತಹ ಘಟನೆಗಳು ವಿವಿಧ ರಾಜ್ಯಗಳಿಂದ ಪದೇಪದೇ ವರದಿಯಾಗುತ್ತಿದೆ. ಎಲ್ಲೆಡೆ ಮುಸ್ಲಿಮರನ್ನು ನಿಂದಿಸಲಾಗುತ್ತಿದೆ ಮತ್ತು ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಈ ನಡುವೆ ಬಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ದೃಢಪಡಿಸಿ ಪ್ರಕಟಿಸಿದ ಅಮೆರಿಕಾದ ವಿದೇಶಾಂಗ ವ್ಯವಹಾರ ಇಲಾಖೆಯ ವರದಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿರಸ್ಕರಿಸಿರುವುದು ವಿಪರ್ಯಾಸವೇ ಸರಿ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಣ್ಣಪುಟ್ಟ ಘಟನೆಗಳಿಗೆ ಪ್ರತಿಕ್ರಿಯಿಸುವ ಸರಕಾರ, ಮುಸ್ಲಿಮರ ಮೇಲಿನ ಸಂಘ ಪರಿವಾರದ ದಾಳಿ ಬಗ್ಗೆ ಮಾತ್ರ ವೌನವಾಗಿರುತ್ತದೆ. ಜೊತೆಗೆ ಜಾತ್ಯತೀತ ತತ್ವಗಳ ಪ್ರತಿಪಾದಕ ವಿರೋಧ ಪಕ್ಷಗಳು ಮುಸ್ಲಿಮ್ ಭದ್ರತಾ ಸಮಸ್ಯೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಿವೆ. ಈ ಮೂಲಕ ಜಾತ್ಯತೀತ ತತ್ವಗಳಿಗೆ ಅವು ದ್ರೋಹ ಬಗೆಯುತ್ತಿವೆ. ದೇಶದ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆಯಾಗಿದ್ದು, ಅದರ ಹೊರತು ದೇಶ ಇನ್ನಷ್ಟು ಅರಾಜಕತೆಗೆ ತಳ್ಳಲ್ಪಡುತ್ತದೆ ಎಂದು ಇ.ಅಬೂಬಕರ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News