ಮಂಗಳೂರು: ಅಂಗಡಿಗಳ ಮೇಲೆ ಮಹಾನಗರ ಪಾಲಿಕೆಯಿಂದ ದಾಳಿ

Update: 2019-06-25 12:20 GMT

ಮಂಗಳೂರು, ಜೂ.25: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ನಡೆಸುತ್ತಿದ್ದ ವ್ಯಾಪಾರ ಮಳಿಗೆಗಳಿಗೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸುಮಾರು 425 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿತು.
ವಶಪಡಿಸಿಕೊಂಡ ವಸ್ತುಗಳಲ್ಲಿ ಪ್ಲಾಸ್ಟಿಕ್ ಕಪ್, ಪ್ಲೇಟ್, ಬ್ಯಾ್ ಮುಂತಾದ ವಸ್ತುಗಳು ಸೇರಿವೆ.

ಪಾಲಿಕೆ ಉಪ ಆಯುಕ್ತೆ (ಕಂದಾಯ) ಗಾಯತ್ರಿ ನಾಯಕ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪರಿಸರ ಇಂಜಿನಿಯರ್ ಮಧು ಎಸ್., ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ ಮುಂತಾದವರು ಭಾಗವಹಿಸಿದರು.

ನಗರದ ಬೀಬಿ ಅಲಾಬಿ ರಸ್ತೆ, ಮೈದಾನ್ ಕ್ರಾಸ್, ಸೆಂಟ್ರಲ್‌ಮಾರ್ಕೆಟ್ ಮುಂತಾದ ಕಡೆ ವ್ಯಾಪಾರ ಮಳಿಗೆಗಳಿಗೆ ಅಧಿಕಾರಿಗಳು ದಾಳಿ ನಡೆಸಿದರು. ಮೂರು ಮಳಿಗೆಗಳಲ್ಲಿ ಅಪಾರ ಪ್ರಮಾಣದಲ್ಲಿ ಇತರ ಮಳಿಗೆಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಪ್ಲಾಸ್ಟಿಕ್‌ವಸ್ತುಗಳು ಪತ್ತೆಯಾಗಿವೆ ಎಂದು ಗಾಯತ್ರಿ ನಾಯಕ್ ದಾಳಿಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ನಡೆಸುತ್ತಿದ್ದ ವ್ಯಾಪಾರ ಮಳಿಗೆ ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ದಂಡ ಪಾವತಿ ಬಳಿಕವೂ ಅನಧಿಕ ವ್ಯಾಪಾರ ನಡೆಸುವ ವ್ಯಕ್ತಿಗಳ ಉದ್ಯಮ ಪರವಾನಿಗೆ ರದ್ದು ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.

ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್) ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ ಸ್ಥಾಪಿಸಲಾದ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕದಲ್ಲಿ ರಫ್ತು ಮಾಡುವ ಉದ್ದೇಶದಿಂದ ಹಾಗೂ ರಫ್ತು ಬೇಡಿಕೆ ಆಧರಿಸಿ ಉತ್ಪಾದಿಸಲಾಗುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ವಿನಾಯಿತಿ ಒದಗಿಸಲಾಗಿದೆ. ಆದರೆ ಮಾರ್ಗಸೂಚಿ ಪಾಲಿಸದ ಕಂಪನಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News