ಮಧು ಬಂಗಾರಪ್ಪಗೆ ಜೆಡಿಎಸ್ ಸಾರಥ್ಯ ವಹಿಸಿ: ಎಚ್.ವಿಶ್ವನಾಥ್

Update: 2019-06-25 12:41 GMT

ಬೆಂಗಳೂರು, ಜೂ.25: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು, ಉತ್ಸಾಹಿಗಳಾಗಿರುವ ಮಧು ಬಂಗಾರಪ್ಪಗೆ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ, ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸುತ್ತಿರುವ ಗ್ರಾಮವಾಸ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವನಾಥ್, ಜಡಗೊಂಡ ಆಡಳಿತ ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ ಎಂದರು.

ಜನರು ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅವುಗಳ ಪರಿಹಾರಕ್ಕಾಗಿ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಜಿಲ್ಲಾಧಿಕಾರಿಗಳೂ ಗ್ರಾಮವಾಸ್ತವ್ಯ ಮಾಡುವುದು ಉತ್ತಮ. ಈ ಹಿಂದೆ ದೇವರಾಜ ಅರಸು ಆಡಳಿತಾವಧಿಯಲ್ಲಿ ಜನ ದೂರು ಹೇಳಿಕೊಂಡು ಬಂದಾಗ, ಇದು ಆಡಳಿತದ ವೈಫಲ್ಯ ಎಂದು ಭಾವಿಸಿ, ತಮಗೆ ಆಪ್ತರಾಗಿದ್ದ ಜಿಲ್ಲಾಧಿಕಾರಿಯನ್ನೆ ಅವರು ವರ್ಗಾವಣೆ ಮಾಡಿದ್ದರು ಎಂದು ವಿಶ್ವನಾಥ್ ಸ್ಮರಿಸಿದರು.

ಮುಖ್ಯಮಂತ್ರಿ ಮಾಡುತ್ತಿರುವ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಪ್ರವೃತ್ತಿಯಲ್ಲ. ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುವ ವೇಳೆ, ಉಪ ಮುಖ್ಯಮಂತ್ರಿಯಾಗಿದ್ದವರೂ ಅವರ ಜೊತೆ ಗ್ರಾಮ ವಾಸ್ತವ್ಯ ಮಾಡಿದ್ದನ್ನು ಮರೆತಂದಿದೆ ಎಂದು ವಿಶ್ವನಾಥ್ ಹೇಳಿದರು.

ಮುಖ್ಯಮಂತ್ರಿ, ಅಧಿಕಾರಿಗಳ ಜೊತೆ ಕೂತು ಸ್ಥಳದಲ್ಲೆ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವಿದು. ಈ ಹಿಂದೆ ಕೆಲವು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ಇದೊಂದು ಒಳ್ಳೆಯ ಕ್ರಮ. ಮುಖ್ಯಮಂತ್ರಿ ಗ್ರಾಮವಾಸ್ತವ್ಯ ಮಾಡುವುದನ್ನು ಅಧಿಕಾರಿಗಳ ಕಾರ್ಯವೈಫಲ್ಯ ಎಂದು ಬಿಂಬಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸಮಸ್ಯೆಗಳಿಗೆ ಎಂದಿಗೂ ಸಾವಿಲ್ಲ. ಪ್ರತಿ ಕ್ಷಣ ಹೊಸ ಸಮಸ್ಯೆಗಳು ಹುಟ್ಟುತ್ತಲೇ ಇರುತ್ತವೆ. ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ, ಜನರ ಸಮಸ್ಯೆಗಳನ್ನು ಆಲಿಸಿದರೆ ಉತ್ತಮವಾಗಿರುತ್ತದೆ ಎಂದು ವಿಶ್ವನಾಥ್ ಸಲಹೆ ನೀಡಿದರು.

ಅಧಿಕಾರಿಗಳು ಹಣ ದುರುಪಯೋಗ ಮಾಡಿದರೆ, ನಿಗದಿತ ಕಾಲದಲ್ಲಿ ಕೆಲಸ ಮುಗಿಯದಿದ್ದರೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸರಕಾರಕ್ಕೆ ತಿಳಿಸುತ್ತದೆ. ಆ ಸಮಿತಿ ತನ್ನ ಕೆಲಸವನ್ನು ಮಾಡುತ್ತಿದೆ. ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರು ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಯಾರೇ ಮುಖ್ಯಮಂತ್ರಿ ಆದರೂ ಅವರಿಗೆ ಸಾಕಷ್ಟು ಕೆಲಸಗಳು ಇರುತ್ತವೆ. ಹಲವಾರು ಇಲಾಖೆಗಳು ಮುಖ್ಯಮಂತ್ರಿ ಬಳಿ ಇರುತ್ತವೆ. ಹೀಗಾಗಿ, ಎಲ್ಲ ಇಲಾಖೆಗಳನ್ನು ನಿರ್ವಹಿಸಲು ಸಮಯ ಸಾಕಾಗುವುದಿಲ್ಲ. ಆದುದರಿಂದ, ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವುದು ಉತ್ತಮ ಎಂದು ವಿಶ್ವನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News