‘ಜೈ ಶ್ರೀರಾಂ’ ಹೇಳದ ಮದ್ರಸ ಶಿಕ್ಷಕನನ್ನು ಥಳಿಸಿ ರೈಲಿನಿಂದ ಹೊರದಬ್ಬಿದ ಗುಂಪು: ಆರೋಪ

Update: 2019-06-25 08:58 GMT

ಹೊಸದಿಲ್ಲಿ, ಜೂ.25: ‘ಜೈ ಶ್ರೀರಾಂ’, ‘ಜೈ ಹನುಮಾನ್’ ಹೇಳಲು ಬಲವಂತಪಡಿಸಿದ ಗುಂಪಿನಿಂದ ಥಳಿತಕ್ಕೊಳಗಾಗಿ ಜಾರ್ಖಂಡ್ ನಲ್ಲಿ 22 ವರ್ಷದ ತಬ್ರೇಝ್ ಅನ್ಸಾರಿ ಮೃತಪಟ್ಟ ಮರುದಿನವೇ ಕೊಲ್ಕತ್ತಾದಲ್ಲಿ ಸೋಮವಾರ ನಡೆದ ಘಟನೆಯೊಂದರಲ್ಲಿ ಅದೇ ಘೋಷಣೆಗಳನ್ನು ಹೇಳಲು ನಿರಾಕರಿಸಿದ ಮದ್ರಸ ಶಿಕ್ಷಕನನ್ನು ಗುಂಪೊಂದು ರೈಲಿನಿಂದ ಹೊರದೂಡಿದೆ.

ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ಕ್ಯಾನಿಂಗ್ ಎಂಬಲ್ಲಿಂದ  ಹೂಗ್ಲಿಗೆ ಪಯಣಿಸುತ್ತಿದ್ದ 26 ವರ್ಷದ ಹಫೀಝ್ ಮುಹಮ್ಮದ್ ಶಾರೂಕ್ ಹಲ್ದರ್ ಎಂಬವರು ಪಯಣಿಸುತ್ತಿದ್ದ ಬೋಗಿಯಲ್ಲಿಯೇ ಇದ್ದ ತಂಡವೊಂದು ‘ಜೈ ಶ್ರೀರಾಂ’ ಹೇಳುವಂತೆ ಉಪಟಳ ನೀಡಲಾರಂಭಿಸಿತ್ತು, ಆತ ನಿರಾಕರಿಸಿದಾಗ ಥಳಿಸಿ ರೈಲು ಪಾರ್ಕ್ ಸರ್ಕಸ್ ನಿಲ್ದಾಣದ ತಲುಪುತ್ತಿದ್ದಂತೆಯೇ ಆತನನ್ನು ಹೊರ ದೂಡಿತ್ತು ಎಂದು ಆರೋಪಿಸಲಾಗಿದೆ.

ಘಟನೆ ನಡೆದಾಗ ಯಾರೂ ತನ್ನ ಸಹಾಯಕ್ಕೆ ಬಂದಿರಲಿಲ್ಲ ಎಂದು ಯುವಕ ದೂರಿದ್ದಾನೆ. ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೈಲು ಹತ್ತುವ ಇಳಿಯುವ ವಿಚಾರದಲ್ಲಿ ಜಗಳವಾಗಿದೆ ಎಂದು ಹೇಳಿರುವ ಪೊಲೀಸರ  ಘಟನೆಯ ಮತೀಯ ಬಣ್ಣದ ಬಗ್ಗೆ ಮಾತನಾಡಿಲ್ಲ.

ಸಂತ್ರಸ್ತ ಯುವಕ ಪೊಲೀಸ್ ದೂರು ನೀಡಿದ್ದರೂ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News