ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವ ಕೆಲಸ ಸರಕಾರದ ಐತಿಹಾಸಿಕ ಕಾರ್ಯಕ್ರಮ: ಸಚಿವ ಖಾದರ್

Update: 2019-06-25 11:51 GMT

ಉಳ್ಳಾಲ: ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವ ಕೆಲಸ ಸರಕಾರದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಹಿಂದೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಹಲವು ಅಡೆತಡೆಗಳಿತ್ತು. ಅದನ್ನು ಹೋಗಲಾಡಿಸಿ ರಾಜ್ಯ ಸರಕಾರ ಕ್ರಾಂತಿಕಾರಿ ನೀತಿಯನ್ನು ಜಾರಿಗೊಳಿಸಿದೆ. ಕುತ್ತಾರಿನ ಮುನ್ನೂರು ಸರಕಾರಿ ಶಾಲೆಯ ಅಭಿವೃದ್ಧಿಗೆ ಇನ್ಫೋಸಿಸ್ ಸಂಸ್ಥೆ ಎರಡು ಕೋಟಿ ರೂ. ನೀಡುವ ಮೌಖಿಕ ಭರವಸೆಯನ್ನು ನೀಡಿದೆ. ಮಂಜೂರುಗೊಂಡಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೂತನ ಕಟ್ಟಡಗಳು, ತಲೆ ಎತ್ತಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ವಲಯ ವತಿಯಿಂದ ಮುನ್ನೂರಿನ ದ.ಕ.ಜಿ.ಪಂ. ಹಿ.ಪ್ರಾ ಶಾಲೆಯಲ್ಲಿ ಒಂದನೇ  ತರಗತಿಗೆ ಆಂಗ್ಲ ಮಾಧ್ಯಮ ವಿಭಾಗದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಂಗಳೂರು ಕ್ಷೇತ್ರದ ಐದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದೆ. ಇನ್ನೊಂದು ಭಾಷೆ ದೂರಿ ಬೇರೆ ಭಾಷೆ ಬೆಳೆಸಲು ಅಸಾಧ್ಯ ಎಂದರು. 

ಸರಕಾರ ಕರ್ನಾಟಕ ಪಬ್ಲಿಕ್ ಶಾಲೆ ಎಂಬ ನೂತನ ಯೋಜನೆಯನ್ನು ಆರಂಭಿಸಿದೆ. ಅಲ್ಲಿ ಅಂಗನವಾಡಿಯಿಂದ ಮೊದಲ್ಗೊಂಡು ದ್ವಿತೀಯ ಪಿಯುಸಿವರೆಗೂ ಒಂದೇ ಕಂಪೌಂಡಿನಲ್ಲಿ ತರಗತಿಗಳು ಇರುತ್ತದೆ. ಕೇಂದ್ರೀಯ ವಿದ್ಯಾಲಯ, ನವೋದಯ ಮಾದರಿ ರೀತಿಯಲ್ಲಿ ತರಗತಿಗಳು ಆರಂಭವಾಗಲಿದೆ. ಭಾಷಾ ಅಜ್ಞಾನದಿಂದ ಹಲವು ಅವಕಾಶಗಳಿಂದ ವಂಚಿತರಾಗುತ್ತೇವೆ. ಇದನ್ನು ಗಮನಿಸುವಾಗ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವರಿಸುವ ಭಾಷಾ ಜ್ಞಾನ ಅಗತ್ಯ ಮೂಡಿಸಬೇಕಿದೆ ಎಂದರು. 

ದೇಶ ಬಲಿಷ್ಠರಾಗಲು ಎ.ಸಿ. ರೂಮಿನಲ್ಲಿ ಕುಳಿತುಕೊಳ್ಳುವ ಶಾಸಕರು, ಐಎಎಸ್, ಮಂತ್ರಿಗಳು, ಉದ್ಯಮಿಗಳು ಬಲಿಷ್ಠರಾದರೆ ಸಾಧ್ಯವಿಲ್ಲ. ಮಕ್ಕಳು ಬಲಿಷ್ಠರಾದಲ್ಲಿ ದೇಶ ಬಲಿಷ್ಠವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸುವ ಮೂಲಕ ಬಲಿಷ್ಠರನ್ನಾಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಮುನ್ನೂರು ಶಾಲಾ ವಠಾರದಲ್ಲಿ ಸ್ಥಳೀಯ ಕಟ್ಟಡಗಳ ತ್ಯಾಜ್ಯ ನೀರಿನ ತೊಂದರೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರಕಾರದಿಂದ ಸದ್ಯ 10ಲಕ್ಷ ರೂ. ಶಾಲೆಯ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ಶಾಲೆ ಅಭಿವೃದ್ಧಿಗೆ ಊರವರ ಸಹಕಾರವೂ ಅತ್ಯಗತ್ಯ ಎಂದರು.
ಆಂಗ್ಲ ಮಾಧ್ಯಮ ತರಗತಿಗೆ ಒಟ್ಟು 31ಮಕ್ಕಳ ದಾಖಲಾತಿ ಹೊಂದಿದರು.

ಶಾಸಕ, ಸಚಿವನಾಗುತ್ತೇನೆಂದು ಹೆತ್ತವರು ನನಗೆ ಶಿಕ್ಷಣ ನೀಡಿಲ್ಲ. ಆದರೆ ಓದಿಗೆ ಶಕ್ತಿ ಇರುವ ಉದ್ದೇಶದಿಂದ ಹೆತ್ತವರು ಕಲಿಯಲು ಪ್ರೋತ್ಸಾಹಿಸಿದ್ದಾರೆ. ಅದರಿಂದಾಗಿ ರಾಜ್ಯದ ಸಚಿವನಾಗುವಷ್ಟು ಬೆಳೆಸಿತು. ಭಾಷೆಯಿಂದ ಎಷ್ಟು ಕುಂಠಿತವಾಗುತ್ತದೆ ಅನ್ನುವ ಅರಿವು ನನ್ನಲ್ಲಿ ಮೂಡಿದೆ. ಹಿಂದಿ ಭಾಷೆ ಪರಿಣತರಾಗುತ್ತಿದ್ದರೆ, ನೀವು ರಾಷ್ಟ್ರ ಮಟ್ಟದ ನಾಯಕರಾಗುತ್ತಿದ್ದೀರಿ ಎಂಬ ಹಿತೈಷಿಯೊಬ್ಬರ ಮಾತು ಭಾಷಾ ಶಿಕ್ಷಣ ನೆನಪಿಸಿತು ಎಂದು ಅವರು ಹೇಳಿದರು.

ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ತಾ.ಪಂ. ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿಸೋಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯ್ಕ್, ಶಿಕ್ಷಣ ಇಲಾಖೆಯ ಪ್ರಶಾಂತ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಮುನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಮುನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮುಸ್ತಾಫ, ಗ್ರಾ.ಪಂ ಸದಸ್ಯ ಹಸನಬ್ಬ, ಎಸ್‍ಡಿಎಂಸಿ ಅಧ್ಯಕ್ಷೆ ಭಾರತಿ, ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶಾರದಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News