ಬಹುಕೋಟಿ ವಂಚನೆ ಪ್ರಕರಣ: ಬೆಂಗಳೂರಿನ ‘ಐಎಂಎ’ ಸಂಸ್ಥೆಗೆ ಮಂಗಳೂರಿನಿಂದಲೂ ಹಣ ಹೂಡಿಕೆ!

Update: 2019-06-25 12:01 GMT

ಮಂಗಳೂರು, ಜೂ.25: ಬೆಂಗಳೂರಿನ ‘ಐಎಂಎ’ ಸಂಸ್ಥೆಗೆ ದ.ಕ.ಜಿಲ್ಲೆಯಲ್ಲೂ ನೂರಾರು ಮಂದಿ ಲಕ್ಷಾಂತರ ರೂಪಾಯಿ ಹೂಡಿರುವುದು ಬೆಳಕಿಗೆ ಬಂದಿದೆ. ಆದರೆ, ಈವರೆಗೆ ಯಾರೊಬ್ಬರೂ ಈ ಬಗ್ಗೆ ಬಹಿರಂಗವಾಗಿ ಹೇಳಲು ಮುಂದೆ ಬಂದಿಲ್ಲ. ಅಲ್ಲದೆ ಪೊಲೀಸರಿಗೆ ದೂರು ನೀಡಲು ಕೂಡಾ ಆಸಕ್ತಿ ವಹಿಸುತ್ತಿಲ್ಲ.
ಮಂಗಳೂರು, ಉಳ್ಳಾಲ, ದೇರಳಕಟ್ಟೆ, ಸುರತ್ಕಲ್, ಕೃಷ್ಣಾಪುರ ಮತ್ತಿತರ ಕಡೆಯ ಜನರು ಈ ಸಂಸ್ಥೆಗೆ ಹಣ ಹೂಡಿದ್ದಾರೆ. ಆ ಪೈಕಿ ಕೆಲವರು ಚಿನ್ನವನ್ನು ಬ್ಯಾಂಕ್, ಸೊಸೈಟಿಯಲ್ಲೂ ಅಡವಿಟ್ಟು ಈ ಸಂಸ್ಥೆಗೆ ಹಣ ಹೂಡಿರುವುದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಕೆಲವು ಮಂದಿ ಏಜೆಂಟರು ಮತ್ತು ಸಹ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಹೂಡಿದ ಹಣಕ್ಕೆ ನಿರೀಕ್ಷೆಗೂ ಮೀರಿದ ಲಾಭ ಬಂದುದನ್ನು ಕಂಡು ಇತರರು ಅತಿ ಆಸೆಯಿಂದ ಹಣವನ್ನು ಈ ಸಂಸ್ಥೆಯಲ್ಲಿ ಹೂಡಿದ್ದಾರೆ. ಕೆಲವರು ವರ್ಷದ ಹಿಂದೆಯೇ ಹೂಡಿಕೆ ಮಾಡಿದ್ದರೆ, ಇನ್ನು ಕೆಲವರು ತಿಂಗಳ ಹಿಂದೆಯಷ್ಟೇ ಹಣ ಹೂಡಿಕೆ ಮಾಡಿದ್ದಾರೆ. ವಂಚನೆ ಪ್ರಕರಣ ಬಯಲಿಗೆ ಬರುತ್ತಲೇ ಇದೀಗ ಹೂಡಿಕೆದಾರರು ಅಧೀರರಾಗಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ರೂ.ನಿಂದ ಹಿಡಿದು 2-3 ಲಕ್ಷ ರೂ.ವರೆಗೂ ಹಣ ಹೂಡಿಕೆ ಮಾಡಿದವರಿದ್ದಾರೆ. ಐಎಂಎ ಸಂಸ್ಥೆಯ ಸ್ಥಾಪಕ ಮುಹಮ್ಮದ್ ಮನ್ಸೂರ್ ಖಾನ್ ಪರಾರಿಯಾಗುತ್ತಲೇ ಹೂಡಿಕೆದಾರರು ಹಣ ಮರಳಿ ಪಡೆಯುವುದು ಹೇಗೆ ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಕೆಲವು ಏಜೆಂಟರು-ಸಹ ಏಜೆಂಟರು ಏನೂ ಆಗುವುದಿಲ್ಲ ಎಂದು ಹೂಡಿಕೆದಾರರಿಗೆ ಭರವಸೆ ನೀಡಿದ ಬಗ್ಗೆಯೂ ‘ವಾರ್ತಾಭಾರತಿ’ಗೆ ಮಾಹಿತಿ ಲಭಿಸಿದೆ.

ಅಂದಹಾಗೆ, ಈ ಸಂಸ್ಥೆಯಲ್ಲಿ ಹಣ ಹೂಡಿದ ಬಗ್ಗೆ ಯಾವುದೇ ರಶೀದಿ ಸಿಗುತ್ತಿಲ್ಲ. ಬದಲಾಗಿ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್ ಸಂದೇಶ ಬರುತ್ತದೆ. ಹಲವರ ಮೊಬೈಲ್ ಸೆಟ್ ಕೆಟ್ಟುಹೋದ ಅಥವಾ ಅನಿರೀಕ್ಷಿತವಾಗಿ ಡಿಲೀಟ್ ಆಗುವ ಮೂಲಕ ಆ ಸಂದೇಶ ಅಳಿಸಿ ಹೋಗಿದೆ. ಹಾಗಾಗಿ ಹಣ ಹೂಡಿದ ಬಗ್ಗೆ ಬೇರೆ ಯಾವುದೇ ದಾಖಲೆ ಇಲ್ಲದ ಕಾರಣ ಮರಳಿ ಹಣ ಪಡೆಯುವ ಆಸೆಯನ್ನೇ ಕೈ ಚೆಲ್ಲಿದ್ದಾರೆ. ಇನ್ನು ಕೆಲವರು ಪೊಲೀಸ್ ಠಾಣೆ, ದೂರು, ನ್ಯಾಯಾಲಯ ಇತ್ಯಾದಿ ರಗಳೆಯೇ ಬೇಡ. ಸಾವಿರಾರು ಮಂದಿಗೆ ಕೋಟ್ಯಂತರ ವಂಚಿಸಿದವ ನಮ್ಮ ಹಣ ಹೇಗೆ ಕೊಟ್ಟಾನು ಎಂದು ಭಾವಿಸಿ ದೂರು ನೀಡಲು ಮಾತ್ರವಲ್ಲ ವಿಷಯವನ್ನು ಬಹಿರಂಗಪಡಿಸಲು ಕೂಡ ನಿರಾಸಕ್ತಿ ತಾಳುತ್ತಿದ್ದಾರೆ.

ಕೆಲವು ಗ್ರಾಹಕರನ್ನು ‘ವಾರ್ತಾಭಾರತಿ’ ಸಂಪರ್ಕಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದಾಗ ನಾವು ಈಗಾಗಲೆ ಹಣ ಹೂಡಿ ಸೋತಿದ್ದೇವೆ. ದೂರು ನೀಡಿದರೂ ನಮಗೆ ಇನ್ನು ಯಾವ ಪ್ರಯೋಜನವೂ ಆಗದು. ಮಕ್ಕಳ ಶಿಕ್ಷಣ ವೆಚ್ಚ ಭರಿಸಲು, ಭವಿಷ್ಯದ ದೃಷ್ಟಿಯಿಂದ ಹೆಚ್ಚು ಸಂಪಾದಿಸಲು ಹಣ ಹೂಡಿದ್ದೆವು. ಆದರೆ ಅದಕ್ಕೆ ನಮ್ಮಲ್ಲಿ ಯಾವ ದಾಖಲೆಯೂ ಇಲ್ಲ. ಹಾಗಾಗಿ ದೂರು ನೀಡಲು ಸಾಧ್ಯವಿಲ್ಲ. ದೂರು ನೀಡಿ ಅದರ ಹಿಂದೆ ಅಲೆದಾಡುವ ಬದಲು ಮತ್ತೆ ದುಡಿದು ಹಣ ಸಂಪಾದಿಸಬಹುದು... ಇತ್ಯಾದಿಯಾಗಿ ಹೇಳಿದರೆ ಇನ್ನು ಕೆಲವರಂತೂ ಆ ಬಗ್ಗೆ ಮಾಹಿತಿಯನ್ನೇ ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ಗ್ರಾಹಕರ ಸಭೆ ನಡೆಸಿದ್ದ ಸಂಸ್ಥೆ: ಐಎಂಎ ಸಂಸ್ಥೆಗೆ ಹೇಗೆ ಹಣ ಹೂಡಬಹುದು? ಹೂಡಿಕೆದಾರರಿಗೆ ಏನು ಲಾಭ ಇತ್ಯಾದಿಯ ಬಗ್ಗೆ ಮಾಹಿತಿ ಮತ್ತು ಸಂಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವ ಸಲುವಾಗಿ ಮಂಗಳೂರು, ತೊಕ್ಕೊಟ್ಟು ಮತ್ತಿತರ ಕಡೆ ಗ್ರಾಹಕರ ಸಭೆ ನಡೆಸಿತ್ತು. ಇದೀಗ ಗ್ರಾಹಕರ ಪ್ರಶ್ನೆಗೆ ಉತ್ತರಿಸಲು ಅಥವಾ ಭರವಸೆಯ ಮಾತುಗಳನ್ನಾಡಲು ಸಂಸ್ಥೆಯ ಯಾರೂ ಕೂಡ ಮುಂದೆ ಬಾರದಿದ್ದುದು ಗ್ರಾಹಕರನ್ನು ಅತಂತ್ರಕ್ಕೀಡು ಮಾಡಿದೆ.

ಐಎಂಎ ಸಂಸ್ಥೆಗೆ ಮಂಗಳೂರಿನಲ್ಲಿ ಹಣ ಹೂಡಿಕೆ ಮಾಡಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ ಈವರೆಗೆ ಯಾರೂ ಕೂಡ ಈ ಬಗ್ಗೆ ನಮಗೆ ದೂರು ನೀಡಿಲ್ಲ. ಒಂದು ವೇಳೆ ಮೋಸ ಹೋದ ಗ್ರಾಹಕರು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಸಂದೀಪ್ ಪಾಟೀಲ್, ಆಯುಕ್ತರು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News