ಕುಮಾರಸ್ವಾಮಿಯ ಗ್ರಾಮವಾಸ್ತವ್ಯ ಯೋಜನೆ ವಿಫಲ: ಕೋಟ ಶ್ರೀನಿವಾಸ್ ಪೂಜಾರಿ

Update: 2019-06-25 12:29 GMT

ಮಂಗಳೂರು, ಜೂ.25: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ವಾಸ್ತವ್ಯ ಯೋಜನೆಯು ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇದರ ಸಾಧನೆಯ ಪ್ರಮಾಣ ಶೂನ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಯೋಜನೆ ಆರಂಭಿಸಿದ್ದರು. ಆಗ 43 ಗ್ರಾಮ ವಾಸ್ತವ್ಯಗಳನ್ನು ಹಮ್ಮಿಕೊಂಡಿದ್ದರು. ಅದರ ಒಂದು ಸುತ್ತುನೋಟ ಕೈಗೊಂಡರೆ ಆ ಗ್ರಾಮಗಳ ಸ್ಥಿತಿಗತಿ ಕಣ್ಣಿಗೆ ರಾಚುತ್ತದೆ ಎಂದು ಹೇಳಿದರು.

ಹಿಂದಿನ ಗ್ರಾಮ ವಾಸ್ತವ್ಯ ಕೈಗೊಂಡ ಗ್ರಾಮಗಳ ಶಾಲೆಗಳು, ಬಡವರ ಕಲ್ಯಾಣ ಯೋಜನೆಗಳ ಅನುಷ್ಠಾನಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದುವರಿಸಬಹುದು. ಆಗ 1.22 ಕೋಟಿ ರೂ. ಖರ್ಚು ಮಾಡಿದ್ದು ಮಾತ್ರ ಸಾಧನೆಯಾಗಿ ಉಳಿದಿದೆ. ಗ್ರಾಮ ವಾಸ್ತವ್ಯ ಕಲ್ಪನೆಯ ಅನುಷ್ಠಾನದ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.

ಸರಕಾರ ಮತ್ತು ಜನಸಾಮಾನ್ಯರ ನಡುವೆ ಸಂಬಂಧವೇ ಇಲ್ಲದಂತಾಗಿದೆ. ಸರಕಾರಕ್ಕೆ ಜನರ ನೋವು, ದುಗುಡ ಅರ್ಥವಾಗಬೇಕಿದೆ. ಅಂತಹ ಕೆಲಸಕ್ಕೆ ಸರಕಾರ ಮುಂದಾಗಬೇಕು. ಮುಖ್ಯಮಂತ್ರಿಯಾದವರು ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತುಕೊಂಡು ಅಧಿಕಾರಿಗಳ ಸಭೆಗಳನ್ನು ಕರೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮತಮ್ಮ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಜತೆ ಸಭೆ ಮಾಡಬೇಕು. ಜತೆಗೆ ಕೆಡಿಪಿ ಸಭೆಗಳನ್ನು ನಡೆಸಬೇಕು. ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಬರ ಪರಿಹಾರಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಬೇಕು. ಜನಸಾಮಾನ್ಯರಿಗೆ ಕುಡಿಯುವ ನೀರಿನ ಸರಬರಾಜನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ಮಳೆ ಬಂದು ಜನತೆ ಸ್ವಲ್ಪ ಉಸಿರು ಬಿಡುವಂತಾಗಿದೆ. ಇದನ್ನು ಹೊರತುಪಡಿಸಿ ಅವಲೋಕಿಸಿದರೆ ರಾಜ್ಯದ ಯಾವುದೇ ಭಾಗದಲ್ಲಿ ಸಮರ್ಪಕ ನೀರಿನ ಯೋಜನೆಗಳನ್ನು ರೂಪಿಸದಿರುವುದು ಸರಕಾರದ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ ಎಂದು ಟೀಕಿಸಿದರು.

ರೈತರಿಗೆ ಅಗತ್ಯವಾಗಿ ಬೇಕಾದ ಮೇವಿನ ಬ್ಯಾಂಕ್‌ಗಳನ್ನು ಸ್ಥಾಪಿಸಿಲ್ಲ. ಗೋಮಾಳ ರಚನೆ ಮಾಡಿಲ್ಲ, ಗೋವುಗಳನ್ನು ರಕ್ಷಣೆ ಮಾಡಿಲ್ಲ. ರಾಜ್ಯದ ವಿವಿಧೆಡೆ ಜನ-ಜಾನುವಾರು ಗುಳೆ ಹೋಗುವ ವಿಷಮಸ್ಥಿತಿ ಎದುರಾಗಿದೆ. ಆಧಾರ್ ಸಮಸ್ಯೆಯಿಂದಾಗಿ ಜನ ಮೈಲುಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಹೆಚ್ಚುವರಿ ಸಿಬ್ಬಂದಿ, ಕಂಪ್ಯೂಟರ್‌ಗಳನ್ನು ಒದಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಆಡಳಿತ ನಡೆಸಲು ಹಣಕಾಸಿನ ತೊಂದರೆ ಇದ್ದಲ್ಲಿ ನಮಗೆ ತೋರಿಸಲಿ. ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಯ ಹೆಸರನ್ನು ಬದಲಿಸಿ ಆರೋಗ್ಯ ಕಾರ್ಡ್ ಎಂದು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಯೋಜನೆಯನ್ನು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸುವಾಗ ಸ್ವಲ್ಪ ಬದಲಿಸಿದರೆ ತಮ್ಮದೇನೂ ಆಕ್ಷೇಪವಿಲ್ಲ. ಯೋಜನೆಯ ಫಲಾನುಭವಿ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿ, ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸೇರಬೇಕಾಗಿದೆ. ಸರಕಾರಿ ಆಸ್ಪತ್ರೆಯಿಂದ ಪ್ರಮಾಣಪತ್ರ ಪಡೆದ ಬಳಿಕವೇ ಚಿಕಿತ್ಸೆ ಎನ್ನುವುದು ದುರಂತ. ರಾಜ್ಯ ಸರಕಾರ ಯೋಜನೆಯಲ್ಲಿನ ತೊಡಕುಗಳನ್ನು ನಿವಾರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೇಂದ್ರದ ಕೃಷಿ ಸಮ್ಮಾನ್ ಯೋಜನೆಯಲ್ಲಿ ರಾಜ್ಯದಲ್ಲಿ 76 ಲಕ್ಷ ಫಲಾನುಭವಿಗಳ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿ ಕೇವಲ 20 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ನೋಂದಾಯಿಸುವ ಅವಧಿ ಕೊನೆಗೊಳ್ಳಲಿದೆ. ಯೋಜನೆಯ ವಿಫಲಕ್ಕೆ ರಾಜ್ಯ ಸರಕಾರವೇ ಹೊಣೆ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.

‘ಸಮ್ಮಿಶ್ರ ಸರಕಾರ ಕೆಟ್ಟ ಕನಸು ಕಾಣುತ್ತಿದೆ’
ರಾಜ್ಯ ಬಿಜೆಪಿಯು ಅಧಿಕಾರ ನಡೆಸಲು ಹಗಲುಗನಸು ಕಾಣುತ್ತಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತಿನ ಭರದಲ್ಲಿ ಹೇಳಿಕೆ ನೀಡಿದ್ದರು. ಅಧಿಕಾರ ನಡೆಸುವ ಯಾವುದೇ ಹಗಲುಗನಸು ಬಿಜೆಪಿಗೆ ಇಲ್ಲ. ಆದರೆ ಜೆಡಿಎಸ್‌ನವರಿಗೆ ಯಾಕೆ ಕೆಟ್ಟ ಕನಸುಗಳು ಬೀಳುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮಧ್ಯಂತರ ಚುನಾವಣೆ ಬರಲಿದೆ. ಚುನಾವಣೆಗೆ ಸಿದ್ಧರಾಗಿ ಎನ್ನುತ್ತಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಬದಾಮಿ ಕ್ಷೇತ್ರದಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತಾರೆ, ಜತೆಗೆ ‘ಅಹಿಂದ’ ಸಮಾವೇಶ ನಡೆಸಲು ಮುಂದಾಗುತ್ತಿದ್ದಾರೆ. ಇದನ್ನು ಅವಲೋಕಿಸಿದರೆ ಸಮ್ಮಿಶ್ರ ಸರಕಾರವೇ ಕೆಟ್ಟ ಕನಸನ್ನು ಕಾಣುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.

'ವಿಧಾನಸೌಧದಲ್ಲಿ ನಡೆದದ್ದು ಆತ್ಮಹತ್ಯೆಯಲ್ಲ; ಬಲಿದಾನ'

ವಿಧಾನಸೌಧದ ಮೂರನೇ ಮಹಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ರೇವಣ್ಣಕುಮಾರ್ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆಗೂ ಮೊದಲು ಸಂತ್ರಸ್ತನು ತನಗೆ ಸ್ಪೀಡ್‌ಪೋಸ್ಟ್ ಕಳುಹಿಸಿದ್ದ. ‘ನನ್ನ ಸಾವಾದರೆ ರಾಜ್ಯ ಸರಕಾರವೇ ಕಾರಣ. ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬರಬೇಕು’ ಎಂದು ಆತ ಪತ್ರದಲ್ಲಿ ಬರೆದಿದ್ದ. ಇದು ಆತ್ಮಹತ್ಯೆ ಯತ್ನವಲ್ಲ; ಬಲಿದಾನ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

‘ರಾಜ್ಯ ಸರಕಾರ ಗೋರಕ್ಷಣಾ ಮಸೂದೆ ವಾಪಸ್ ಮಂಡಿಸಲಿ’
ರಾಜ್ಯದಲ್ಲಿ 2010ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಗೋರಕ್ಷಣಾ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿತ್ತು. ರಾಷ್ಟ್ರಪತಿ ಮತ್ತಷ್ಟು ವಿವರ ಕೇಳಿದ್ದರು. 2012ರಲ್ಲಿ ಮಸೂದೆಯ ತಿದ್ದುಪಡಿ ನಂತರ ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಆನಂತರ ಸರಕಾರ ಉರುಳಿತು. ನಂತರ ಮಸೂದೆಯನ್ನು ವಾಪಸ್ ಪಡೆದ ಕೀರ್ತಿ ಕಾಂಗ್ರೆಸ್‌ನದ್ದಾಗಿದೆ. ರಾಜ್ಯ ಸರಕಾರ ಗೋರಕ್ಷಣಾ ಮಸೂದೆ ವಾಪಸ್ ಮಂಡಿಸಲಿ ಎಂದು ಕೋಟ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಗೋರಕ್ಷಣಾ ಮಸೂದೆ ಜಾರಿಗೆ ತಂದಿತ್ತು. ಮಸೂದೆ ವಾಪಸ್ ಪಡೆದ ಕಾಂಗ್ರೆಸ್ ಕ್ರಮದ ಬಗ್ಗೆ ಯು.ಟಿ.ಖಾದರ್‌ಗೆ ನೆನಪಿಲ್ಲ ಎಂದು ಕಾಣುತ್ತದೆ. ಗೋರಕ್ಷಣೆ ಮಾಡಬೇಕು ಎನ್ನುವ ಕಾಳಜಿ ಇದ್ದರೆ ಮಸೂದೆ ಜಾರಿಗೆ ತರಲಿ ಎಂದು ಸವಾಲೆಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News