ಗೋವಿನ ಹೆಸರಲ್ಲಿ ಕೋಮುಗಲಭೆ ನಡೆಸಲು ಸಂಘಪರಿವಾರ ಪ್ರಯತ್ನ: ದ.ಕ.ಜಿಲ್ಲಾ ಎಸ್‌ಡಿಪಿಐ ಆರೋಪ

Update: 2019-06-25 12:33 GMT

ಮಂಗಳೂರು, ಜೂ.25: ದ.ಕ.ಜಿಲ್ಲೆಯಲ್ಲಿ ಗೋವಿನ ಹೆಸರಿನಲ್ಲಿ ಕೋಮುಗಲಭೆ ನಡೆಸಲು ಸಂಘಪರಿವಾರ ಭಾರೀ ಪ್ರಯತ್ನ ಮಾಡುತ್ತಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.

ಈ ಸಂಬಂಧ ಪಕ್ಷದ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ ಜಿಲ್ಲೆಯಲ್ಲಿ ಹಲವು ದಿನಗಳಿಂದ ಗೋವಿನ ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ವ್ಯಾಪಕ ಚರ್ಚೆಯಾಗುತ್ತಿದೆ. ಗೋವಿನ ಅಕ್ರಮ ಸಾಗಾಟದಲ್ಲಿ ಸಂಘಪರಿವಾರದ ಕೈವಾಡವೇ ಹೆಚ್ಚಾಗಿರುವುದು ಕಂಡು ಬಂದಿದೆ. ಅಲ್ಲದೆ ದನವನ್ನು ಖರೀದಿಸಿ ವ್ಯಾಪಾರಸ್ಥರು ಕೊಂಡೊಯ್ಯುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುವ ಸಂಘಪರಿವಾರದ ಚಾಳಿ ಮುಂದುವರಿಯುತ್ತಿದೆ ಎಂದಿದ್ದಾರೆ.

ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ ಘಟನೆ ಸೋಮವಾರ ನಡೆದಿದೆ. ಈ ಬಗ್ಗೆ ಬಜರಂಗದಳದ ನಾಯಕರ ಮೇಲೆ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಅಡ್ಯನಡ್ಕದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೇ ಮುಸಲ್ಮಾನರನ್ನು ಅವಾಶ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಲಾಗಿದೆ. ಆದರೂ ವಿಟ್ಲ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸದಿರುವುದು ವಿಪರ್ಯಾಸ. ಇದನ್ನೇ ಮುಂದಿಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರು ಮಂಗಳವಾರ ವಿಟ್ಲ ಠಾಣಾ ವ್ಯಾಪ್ತಿಯ ಸೂರಿಕುಮೇರ್, ಬಂಟ್ವಾಳ ಠಾಣಾ ವ್ಯಾಪ್ತಿಯ ಕುದ್ರಬೆಟ್ಟುನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿ ಬಸ್ಸುಗಳಿಗೆ ಹಾನಿ ಮತ್ತು ಪ್ರಯಾಣಿಕರಿಗೆ ಗಾಯ ಮಾಡಿದ್ದಾರೆ. ಇದು ಕೋಮುದ್ವೇಷ ಹರಡಿಸಿ ಕೋಮುಗಲಭೆ ನಡೆಸಲು ಪ್ರಯತ್ನಿಸುತ್ತಿರುವ ಮುನ್ಸೂಚನೆಯಾಗಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮವಾಗಿ ಕಾನೂನು ಕೈಗೆತ್ತಿಕೊಂಡು ಕೋಮುಗಲಭೆ ನಡೆಸಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ಗೂಂಡಾಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News