ಅಕ್ರಮ ಗೋ ಸಾಗಾಟವನ್ನು ಸಕ್ರಮಗೊಳಿಸಿದ ಪೊಲೀಸರ ನಡೆಗೆ ಎಸ್‌ಡಿಪಿಐ ಖಂಡನೆ

Update: 2019-06-25 12:45 GMT

ಮಂಗಳೂರು, ಜೂ.25: ಮೂಡುಬಿದಿರೆ ಸಮೀಪದ ದರೆಗುಡ್ಡೆ-ಕೆಲ್ಲಪುತ್ತಿಗೆ ಎಂಬಲ್ಲಿ ಬಜರಂಗದಳದ ಕಾರ್ಯಕರ್ತರು ರಾತ್ರಿ ಹೊತ್ತಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರೂ ಅಕ್ರಮ ಗೋ ಸಾಗಾಟದ ಪ್ರಮುಖ ರೂವಾರಿ ಬಿಜೆಪಿ ಮುಖಂಡ ಕೇಶವ ಹೆಗಡೆ ತಪ್ಪಿಸಿ ತಲೆಮರೆಸಿಕೊಂಡಿದ್ದಾರೆ. ಈ ಸುದ್ದಿ ಜಿಲ್ಲಾದ್ಯಂತ ಚರ್ಚೆಯಾಗುತ್ತಿದ್ದರೂ ಪೊಲೀಸರು ತರಾತುರಿಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿ ಇದು ಅಕ್ರಮ ಗೋ ಸಾಗಾಟ ಅಲ್ಲ. ಖರೀದಿಸಿಯೇ ಪಡೆದಿರುವುದು ತನಿಖೆಯಲ್ಲಿ ದೃಡಪಟ್ಟಿದೆ ಎಂದು ಅಕ್ರಮವನ್ನು ಸಕ್ರಮಗೊಳಿಸಲು ಮೂಂದಾಗಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಎಸ್‌ಡಿಪಿಐ ಪ್ರಕಟನೆಯಲ್ಲಿ ತಿಳಿಸಿದೆ.

ಅಕ್ರಮ ಗೋ ಸಾಗಾಟದಲ್ಲಿ ಪೊಲೀಸರ ಕೈವಾಡವೂ ಇದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಸಕ್ರಮ ಗೋ ಸಾಗಾಟ ಮಾಡುವವರು ತಡರಾತ್ರಿಯಲ್ಲಿ ಕದ್ದುಮುಚ್ಚಿ ಯಾಕೆ ಕೊಂಡೊಯ್ಯುತ್ತಾರೆ? ಮತ್ತು ಪ್ರಮುಖ ರುವಾರಿ ಬಿಜೆಪಿ ಮುಖಂಡ ಕೇಶವ ಹೆಗಡೆ ಯಾಕೆ ತಪ್ಪಿಸಿಕೊಳ್ಳುತ್ತಾರೆ? ತರಾತುರಿಯಲ್ಲಿ ಯಾಕೆ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂಬುದರ ಬಗ್ಗೆ ಪೊಲೀಸರು ಉತ್ತರಿಸಬೇಕಾಗಿದೆ. ಯಾರೇ ಅಕ್ರಮ ಗೋ ಸಾಗಾಟ ಮಾಡಿದರು ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಬೇಕಾದದ್ದು ಪೊಲೀಸರ ಕರ್ತವ್ಯ. ಆದರೆ ಕಾನೂನು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವೇ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಅಕ್ರಮ ಗೋ ಸಾಗಾಟದಲ್ಲಿ ಪ್ರಮುಖ ಪಾತ್ರವಹಿಸಿ ಬಂಧಿತರಾಗಿರುವುದರಲ್ಲಿ ಸಂಘ ಪರಿವಾರದವರೇ ಹೆಚ್ಚು. ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ತಾರತಮ್ಯ ಮಾಡದೆ ತನಿಖೆಗೆ ಒಳಪಡಿಸಬೇಕು ಮತ್ತು ಮೂಡುಬಿದಿರೆಯ ಅಕ್ರಮ ಗೋ ಸಾಗಾಟವನ್ನು ಸಕ್ರಮಗೊಳಿಸಿದ ಪೊಲೀಸರ ಮೇಲೆ ಸೂಕ್ತ ಕ್ರಮ ಜರಗಿಸಬೇಕು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News