ಮಣಿಪಾಲ: ವಿಷ ಉಣಿಸಿ 10 ಬೀದಿನಾಯಿಗಳ ಹತ್ಯೆ; ಪ್ರಕರಣ ದಾಖಲು

Update: 2019-06-25 12:48 GMT

ಮಣಿಪಾಲ, ಜೂ.25: ಮಣಿಪಾಲ ಮಾಂಡವಿ ಎಮರಾಲ್ಡ್ ವಸತಿ ಸಮುಚ್ಛಯದ ಎದುರು ದುಷ್ಕರ್ಮಿಗಳು ಕಳೆದ ಎರಡು ದಿನಗಳಲ್ಲಿ ಒಟ್ಟು 10 ಬೀದಿ ನಾಯಿಗಳನ್ನು ವಿಷ ಉಣಿಸಿ ಸಾಯಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಹಿರಿಯ ಪ್ರಾಣಿ ಹಕ್ಕುಗಳ ದಾವೆದಾರರಾದ ಬಬಿತಾ ರಾಜ್ ನೀಡಿದ ದೂರಿನಂತೆ ಇಂದು ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಾಂಡವಿ ಎಮರಾಲ್ಡ್ ಎದುರು ಜೂ.22ರಂದು ರಾತ್ರಿ 9.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವಿಷಪೂರಿತ ಮೀನುಗಳನ್ನು ಬೀದಿ ನಾಯಿಗಳಿಗೆ ಹಾಕಿದ್ದು, ಇದನ್ನು ತಿಂದ 8 ನಾಯಿಗಳು ಮೃತಪಟ್ಟಿವೆ. ಅದೇ ರೀತಿ ಜೂ.24ರಂದು ಸಂಜೆ 4.30ರ ಸುಮಾರಿಗೆ ಮರಿ ಸೇರಿದಂತೆ ಎರಡು ನಾಯಿಗಳ ಶವಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಬಬಿತಾ ರಾಜ್ ತಿಳಿಸಿದ್ದಾರೆ.

ಈ 10 ನಾಯಿಗಳು ಕೂಡ ಶಂಕಿತ ವ್ಯಕ್ತಿ ವಿಷ ಉಣಿಸಿದ ಪರಿಣಾಮವಾಗಿ ಮೃತಪಟ್ಟಿದ್ದು, ಈ ಎಲ್ಲ ನಾಯಿಗಳ ಕಳೇಬರಹವನ್ನು ಉಡುಪಿ ನಗರಸಭೆ ಯವರು ತೆಗೆದುಕೊಂಡು ಹೋಗಿದ್ದಾರೆ. ಈ ನಾಯಿಗಳು ಶಾಂತಾ ಸ್ವಾಭವ ದ್ದಾಗಿದ್ದು, ಯಾರಿಗೂ ಯಾವುದೇ ತೊಂದರೆ ಮಾಡುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಸೆಕ್ಷನ್ 11ರ ಉಲ್ಲಂಘನೆಯಾಗಿದೆ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 428, 429 ಮತ್ತು ಕರ್ನಾಟಕ ಪೊಲೀಸರ ಸೆಕ್ಷನ್ 93ರ ಅಡಿಯಲ್ಲಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿ, ಶೀಘ್ರ ತನಿಖೆ ನಡೆಸಬೇಕು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ದಾಖಲೆಗಳು ಪರಿಶೀಲಿಸಿ ಕೂಡಲೇ ಆರೋಪಿ ಗಳನ್ನು ಪತ್ತೆ ಹಚ್ಚಬೇಕು. ಈ ಸಂಬಂಧ ನಗರಸಭೆಯವರು ತೆಗೆದುಕೊಂಡು ಹೋದ ನಾಯಿಗಳ ಶವಗಳನ್ನು ಪಡೆದು ಜಿಲ್ಲಾ ಪಶುವೈದ್ಯ ಅಧಿಕಾರಿಗಳ ಮೂಲಕ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News