ಸ್ಮಾರ್ಟ್ ಸಿಟಿಯಡಿ ಜಲಮುಖ ಪ್ರದೇಶ ಅಭಿವೃದ್ಧಿ!

Update: 2019-06-25 13:05 GMT

ಮಂಗಳೂರು, ಜೂ. 25: ಸ್ಮಾರ್ಟ್ ಸಿಟಿ ಯೋಜನೆಯಡಿ ಜಲಾಭಿಮುಖ ಪ್ರದೇಶಗಳ ಅಭಿವೃದ್ದಿಗೆ ಒತ್ತು ನೀಡಿ ಅಭಿವೃದ್ಧಿ ಪಡಿಸುವ ಪರಿಕಲ್ಪನೆಯ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಮುಖ ಉದ್ದೇಶವನ್ನು ಹೊಂದಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತ ನಿರ್ದೇಶಕ ನಾರಾಯಣಪ್ಪ ತಿಳಿಸಿದ್ದಾರೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕುರಿತಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಈ ಯೋಜನೆಯಡಿ ಮಂಗಳೂರು ಧಕ್ಕೆ ಪ್ರದೇಶಕ್ಕೆ ಕಾಲ್ನಡಿಗೆಯ ದಾರಿಯ ಮೂಲಕ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನೇರ ಸಂಪರ್ಕ ಕಲ್ಪಿಸಿ, ವಿಹಾರ ತಾಣವನ್ನಾಗಿಸುವ ಯೋಜನೆ ಇದಾಗಿದೆ. ಸದ್ಯ ಮಂಗಳೂರು ಧಕ್ಕೆ ಪ್ರದೇಶಕ್ಕೆ ಪ್ರವೇಶಿಸಲು ಸೂಕ್ತವಾದ ಮೂಲಭೂತ ಸೌಕರ್ಯ (ರಸ್ತೆ)ದ ಕೊರತೆ ಇದೆ. ಧಕ್ಕೆ ಪ್ರದೇಶದಲ್ಲಿ ಕೃತಕ ದ್ವೀಪವಾಗಿ ಮಾರ್ಪಟ್ಟಿರುವ ಜಾಗದಲ್ಲಿ ಪ್ರವಾಸಿ ತಾಣವಾಗಿಸಿ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಸುಮಾರು 235 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಯೋಜನೆ ಕುರಿತಾದ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಒಟ್ಟು 2300 ಕೋಟಿ ರೂ. ಅಂದಾಜು ವೆಚ್ಚದ ಸ್ಮಾರ್ಟ್ ಸಿಟಿ ಯೋಜನೆಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾಡಿ 44 ಕಾಮಗಾರಿಗಳು (958.57 ಕೋಟಿ ರೂ. ವೆಚ್ಚದ) ಹಾಗೂ ಖಾಸಗಿ ಸಾರ್ವಜನಿಕ ಸಹಭಾಗಿತ್ವದ 912.17 ಕೋಟಿ ರೂ.ಗಳ 17 ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ಅವರು ವಿವರ ನೀಡಿದರು.

ಕೇಂದ್ರ ಸರಕಾರದಿಂದ ಎರಡನೆ ಹಂತದಲ್ಲಿ 2016 ಸೆಪ್ಟಂಬರ್ 29ರಂದು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ) ರಚನೆಗೊಂಡು 2017ರ ಎಪ್ರಿಲ್ 6ರಿಂದ ಯೋಜನೆ ಜಾರಿಯಾಯಿತು. ನಗರದ ಎಂಟು ವಾರ್ಡ್‌ಗಳ 1628 ಎಕರೆ ಪ್ರದೇಶದ ಅಭಿವೃದ್ಧಿ ಈ ಸ್ಮಾರ್ಟ್ ಸಿಟಿ ಯೋಜನೆಯದ್ದಾಗಿದೆ. ಈ ಯೋಜನೆಯಡಿ ಕಾರ್ಯಾದೇಶಗೊಂಡಿರುವ ಕಾಮಗಾರಿಗಳಲ್ಲಿ ಗಡಿಯಾರ ಗೋಪುರ ನಿರ್ಮಾಣ ಕಾಮಗಾರಿ (90 ಲಕ್ಷ ರೂ. ವೆಚ್ಚದಲ್ಲಿ) ಬಹುತೇಕ ಅಂತಿಮಗೊಂಡಿದೆ ಎಂದು ಅವರು ಹೇಳಿದರು. ಯೋಜನೆಯಡಿ 106.38 ಕೋಟಿ ರೂ.ಗಳ 10 ಕಾಮಗಾರಿಗಳು ಕಾರ್ಯಾದೇಶಗೊಂಡಿದ್ದರೆ, 326.72 ಕೋಟಿ ರೂ.ಗಳ 12 ಕಾಮಗಾರಿಗಳು ಟೆಂಡರ್ ಗಿವೆ. 161.86 ಕೋಟಿ ರೂ. ವೆಚ್ಚದ 9 ಕಾಮಗಾರಿಗಳು ವಿಸ್ತೃತ ಯೋಜನೆಯ ವರದಿ ಹಂತದಲ್ಲಿವೆ. 363.61 ಕೋಟಿ ರೂ.ಗಳ 13 ಕಾಮಗಾರಿಗಳು ಪರಿಕಲ್ಪನೆ ವರದಿಯ ಹಂತದಲ್ಲಿದೆ ಎಂದು ಅವರು ವಿವರಿಸಿದರು.

ಕದ್ರಿ ಪಾರ್ಕ್‌ಗೆ ಹೈಟೆಕ್ ಸ್ಪರ್ಶ
ಕದ್ರಿ ಪಾರ್ಕನ್ನು ಸಂಪೂರ್ಣವಾಗಿ ಒಂದಾಗಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿಪಡಿಸಿ ಹೈಟೆಕ್ ಸ್ಪರ್ಶವನ್ನು ಈ ಯೋಜನೆಯಡಿ ನೀಡಲಾಗುವುದು. ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಎಮ್ಮೆಕೆರೆಯಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಕೂಡಾ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಲಿದೆ. ಕಾವೂರು ಮತ್ತು ಗುಜ್ಜರಕೆರೆಗಳು ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳಲಿದೆ. ಮಂಗಳಾ ಕ್ರೀಡಾಂಗಣವು ಸಂಪೂರ್ಣವಾಗಿ ಉನ್ನತೀಕರಣಕ್ಕೆ ಯೋಜಿಸಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂ.ಗಳನ್ನು ಇರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯು ಪಡೀಲ್‌ಗೆ ಸ್ಥಳಾಂತರಗೊಳ್ಳಲಿರುವ ಕಾರಣ, ಈಗಿರುವ ಕಚೇರಿಯು ಮ್ಯೂಸಿಯಂ ಹಾಗೂ ಗ್ರಂಥಾಲಯ ಆಗಿ ಪರಿವರ್ತನೆಯಾಗಲಿದೆ. ಕಾರ್‌ಸ್ಟ್ರೀಟ್ ಮತ್ತು ವೆಂಕಟರಮಣ ದೇವಾಲಯ ಧಾರ್ಮಿಕ ವಲಯದ ಮರು ಸುಧಾರಣೆ, ಜೆಪ್ಪು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಿಂದ ಮೊರ್ಗನ್ಸ್‌ಗೇಟ್ ರೈಲ್ವೇ ಕೆಳ ಸೇತುವೆ ಸೇರಿದಂತೆ ಸಂಪರ್ಕ ರಸ್ತೆ ನಿರ್ಮಾಣ 30 ಕೋಟಿ ರೂ. ವೆಚ್ಚದಲ್ಲಿ ಆಗಲಿದೆ. ಹಂಪನಕಟ್ಟೆ ಜಂಕ್ಷನ್‌ನಲ್ಲಿರುವ ಚಿಲ್ಲರೆ ವ್ಯಾಪಾರಸ್ಥರಿಗೆ ಬಹುಮಹಡಿ ಕಟ್ಟಡದ ಜತೆಗೆ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ಟೆಂಡರ್ ಕರೆಯಲಾಗಿದೆ. ಅಲ್ಲಿನ ಶೇ. 99ರಷ್ಟು ಅಂಗಡಿ ಮಾಲಕರು ಒಪ್ಪಿಗೆಯನ್ನು ನೀಡಿದ್ದಾರೆ. ವಿನ್ಯಾಸ ಕೂಡಾ ಅಂಗೀಕಾರಗೊಂಡಿದೆ. ಬಹು ಮಹಡಿ ಕಾರು ಪಾರ್ಕಿಂಗ್‌ನಿಂದಾಗಿ ಮನಪಾಕ್ಕೆ ಸುಮಾರು 2 ಕೋಟಿ ರೂ.ನಷ್ಟು ಆದಾಯವೂ ಬರಲಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳಾದ ಚಂದ್ರಕಾಂತ್, ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

ಬಸ್ಸು ನಿಲ್ದಾಣ ಪಡೀಲ್‌ಗೆ ಸ್ಥಳಾಂತರ
ಸುಸಜ್ಜಿತ ಬಸ್ಸು ನಿಲ್ದಾಣ ಯೋಜನೆಯು ಇದೀಗ ಮತ್ತೆ ಪಂಪ್‌ವೆಲ್‌ನಿಂದ ಪಡೀಲ್‌ಗೆ ಸ್ಥಳಾಂತರಗೊಂಡಿದೆ. ಪಂಪ್‌ವೆಲ್ ಏಳು ಎಕರೆ ಜಾಗವನ್ನು ಹೊಂದಿದ್ದರೆ, ಇದೀಗ ಪಡೀಲ್‌ನಲ್ಲಿ 20 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಜಾಗ ಗುರುತಿಸಲಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಧಿಕಾರಿ ಸಂಕೀರ್ಣದ ಸಮೀಪದಲ್ಲೇ ಜಾಗ ಇದೆ ಎಂದು ಮನಪಾ ಪ್ರಭಾರ ಆಯುಕ್ತೂ ಆಗಿರುವ ನಾರಾಯಣಪ್ಪ ತಿಳಿಸಿದರು.

ಸಮಗ್ರ ಸಾರಿಗೆ ಕೇಂದ್ರವಾಗಿ ಬಸ್ ಟರ್ಮಿನಲ್‌ನೊಂದಿಗೆ ಚಿಲ್ಲೆರೆ ವ್ಯಾಪಾರಸ್ಥರ ಅಂಗಡಿಗಳು ಮತ್ತು ಮನರಂಜನಾ ಕೇಂದ್ರವಾಗಿ ಪಡೀಲ್‌ನಲ್ಲಿ ಬಸ್ಸು ನಿಲ್ದಾಣ ನಿರ್ಮಾಣವಾಗಲಿದೆ. ಸದ್ಯ ಈ ಯೋಜನೆ ಪರಿಕಲ್ಪನೆ ವರದಿಯ ಹಂತದಲ್ಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News