ಗ್ರಾಪಂಗಳಲ್ಲಿ ಕೆಡಿಪಿ; ಉಡುಪಿ ಜಿಪಂನಲ್ಲಿ ವ್ಯಾಪಕ ಚರ್ಚೆ

Update: 2019-06-25 14:46 GMT

ಮಣಿಪಾಲ, ಜೂ.25: ಈಗ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ನಡೆಯುತ್ತಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯನ್ನು ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯತ್ ಮಟ್ಟದಲ್ಲೂ ತ್ರೈಮಾಸಿಕ ಪರಿಶೀಲನಾ ಸಮಿತಿಯ ಸಭೆ ನಡೆಸುವಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಕುರಿತಂತೆ ಇಂದು ನಡೆದ ಉಡುಪಿ ಜಿಲ್ಲಾ ಪಂಚಾಯತ್‌ನ 16ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ವ್ಯಾಪಕ ಚರ್ಚೆ ನಡೆಸಿದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಇಂದಿನ ಸಾಮಾನ್ಯ ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ತಿನ ಪ್ರತಿಪಕ್ಷಗಳ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಜನಾರ್ದನ ತೋನ್ಸೆ, ಜಿಲ್ಲೆಯಲ್ಲಿ ಎಲ್ಲಾ ಗ್ರಾಪಂಗಳಲ್ಲೂ ಈಗ ಪಿಡಿಓಗಳಿಲ್ಲ. ಕೆಲವು ಕಡೆ ಒಬ್ಬ ಪಿಡಿಓಗೆ ಮೂರ್ನಾಲ್ಕು ಗ್ರಾಪಂಗಳ ಜವಾಬ್ದಾರಿ ಇದೆ. ಅಲ್ಲದೇ ಗ್ರಾಮ ಲೆಕ್ಕಾಧಿಕಾರಿಗಳ ಸಾಕಷ್ಟು ಹುದ್ದೆ ಜಿಲ್ಲೆಯಲ್ಲಿ ಖಾಲಿ ಇದೆ. ಇದರ ನಡುವೆ ಗ್ರಾಪಂಗಳು ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಪಂ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲು ಸಾಧ್ಯವಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದರು.

ಈಗ ಗ್ರಾಪಂಗಳಲ್ಲಿ ನಡೆಯಬೇಕಾದ ಗ್ರಾಮಸಭೆಗಳೇ ಸಮರ್ಪಕ ರೀತಿ ಯಲ್ಲಿ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಗ್ರಾಮಸಭೆಗಳೆಂದರೆ ಅಸಡ್ಡೆ. ಅವರು ಗ್ರಾಮಸಭೆಗಳಿಗೆ ಗೈರುಹಾಜರಾಗುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಹೆಚ್ಚಿನ ಕಡೆ ಕಾಟಾಚಾರಕ್ಕೆಂಬಂತೆ ಗ್ರಾಮಸಭೆಗಳು ನಡೆಯುತ್ತಿವೆ ಎಂದು ಹೇಳಿದ ತೋನ್ಸೆ, ಜಿಲ್ಲಾ ಮಟ್ಟದಲ್ಲಿ ಯೋಜನಾ ಸಮಿತಿ ಇದೆ. ಅದು ಎಷ್ಟು ಸಭೆ ನಡೆಸಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರ ಒಂದು ಒಳ್ಳೆಯ ಉದ್ದೇಶದಿಂದ ಗ್ರಾಪಂ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುವಂತೆ ಹೇಳಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸೋಣ. ರಾಜ್ಯದ 30 ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಗ್ರಾಮಸಭೆ ನಡೆಯುತ್ತಿಲ್ಲ. ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ, ಕೊಡಗು, ಶಿವಮೊಗ್ಗಗಳಲ್ಲಿ ಗ್ರಾಪಂಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕರಾವಳಿಯಲ್ಲಿ ತೆರಿಗೆ ಸಂಗ್ರಹ ಶೇ.97-98 ಇದೆ. ಹೀಗಾಗಿ ಇಲ್ಲಿ ಕೆಡಿಪಿ ಸಭೆಯನ್ನು ನಡೆಸಿದರೆ ಅದು ಯಶಸ್ವಿಯಾಗಬಹುದು ಎಂದರು.

ಜಿಲ್ಲೆಯಲ್ಲಿ 158 ಗ್ರಾಪಂಗಳಲ್ಲಿ ನಡೆಸುವ ಕೆಡಿಪಿಗಳಲ್ಲಿ ಕೆಲವು ವಿಫಲವಾಗಬಹುದು. ಆದರೆ ಹೆಚ್ಚಿನವು ಸಫಲವಾಗುವುದರಲ್ಲಿ ಸಂದೇಹವಿಲ್ಲ. ಅಲ್ಲದೇ ಕೆಡಿಪಿಗೆ 27 ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸ ಬೇಕಾಗಿರುವುದರಿಂದ ಗ್ರಾಪಂಗಳಲ್ಲಿ ಹೆಚ್ಚಿನ ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ನಡೆಯಬಹುದು. ಹೆಚ್ಚೆಚ್ಚು ಸರಕಾರಿ ಯೋಜನೆಗಳು ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಿದೆ ಎಂದು ಕೋಟ ನುಡಿದರು.

ಇದನ್ನು ಹೇಗೆ ಯಶಸ್ವಿಗೊಳಿಸಬಹುದು ಎಂಬ ಬಗ್ಗೆ ನಾವು ಯೋಚಿಸೋಣ. ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಕೂಡಲೇ ಗ್ರಾಪಂ, ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸರಕಾರದ ಆದೇಶದಂತೆ ಎಪ್ರಿಲ್, ಜುಲೈ, ಅಕ್ಟೋಬರ್, ಡಿಸೆಂಬರ್ ತಿಂಗಳಲ್ಲಿ ಕೆಡಿಪಿ ಸಭೆ ನಡೆಯಬೇಕಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯ 158 ಗ್ರಾಪಂಗಳಲ್ಲಿ 140 ಮಂದಿ ಪಿಡಿಓಗಳಿದ್ದಾರೆ ಎಂದು ಸಿಇಓ ಉತ್ತರಿಸಿದರು. ಕೆಡಿಪಿ ಸಭೆ ನಡೆಸುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಕೂಡಲೇ ಕಾರ್ಯಾಗಾರವೊಂದನ್ನು ಏರ್ಪಡಿಸುವಂತೆ ಕೋಟ, ಸಿಇಓಗೆ ಸೂಚನೆಗಳನ್ನು ನೀಡಿದರು. ಇದರಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಹಾಗೂ ಎಲ್ಲರೂ ಗ್ರಾಪಂಗೆ ಸಹಕಾರ ನೀಡುವಂೆ ನೋಡಿಕೊಳ್ಳುವಂತೆ ಸೂಚಿಸಿದರು.

ಗ್ರಾಪಂಗಳಿಗೆ ನಿರ್ಣಯದ ಪ್ರತಿ: ಗ್ರಾಮಗಳಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಪಂನಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ಆಯಾ ಗ್ರಾಪಂಗಳ ಗಮನಕ್ಕೆ ತರಬೇಕು. ಇವುಗಳನ್ನು ಕನಿಷ್ಠ ಈಮೇಲ್ ಮೂಲಕವಾದರೂ ಆಯಾ ಗ್ರಾಪಂಗಳಿಗೆ ಕಳುಹಿಸಬೇಕು ಎಂದು ಕೋಟ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಗೌರಿ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ಜನಾರ್ದನ ತೋನ್ಸೆ ಅವರು ಸಭೆಯ ಗಮನ ಸೆಳೆದರು. ಇನ್ನು ಮುಂದೆ ಪಂಚಾಯತ್‌ರಾಜ್, ಲೋಕೋಪಯೋಗಿ, ಸಣ್ಣ ನೀರಾವರಿ, ಭೂಸೇನಾ ನಿಗಮ, ನಿರ್ಮಿತಿ, ವಾರಾಹಿ, ಮೀನುಗಾರಿಕೆ ಮತ್ತು ಬಂದರು ಇಲಾಖೆಗಳು ತಮ್ಮ ಇಲಾಖೆ ಕಾಮಗಾರಿಗಳ ಬಗ್ಗೆ ತಪ್ಪದೇ ಆಯಾ ಗ್ರಾಪಂ ಹಾಗೂ ನಗರಾಡಳಿತ ಸಂಸ್ಥೆಗಳ ಗಮನಕ್ಕೆ ಸಭೆಯ ನಿರ್ಣಯಗಳನ್ನು ತರಬೇಕು ಎಂದು ಕೋಟ ತಿಳಿಸಿದರು.

ಈ ಬಾರಿ ಮಳೆಗಾಲ ಇನ್ನೂ ಪೂರ್ಣಪ್ರಮಾಣದಲ್ಲಿ ಜಿಲ್ಲೆಯಲ್ಲಿ ಪ್ರಾರಂಭ ಗೊಳ್ಳದಿದ್ದರೂ, ಜಿಲ್ಲಾಡಳಿತ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಯಾವ ತಯಾರಿ ನಡೆಸಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಬಾಧಿತವಾಗುವ ನಾಲ್ಕು ಗ್ರಾಪಂಗಳಿವೆ. ಇವುಗಳಲ್ಲಿ ಉಪ್ಪೂರು ಮತ್ತು ಹಾವಂಜೆಗಳಲ್ಲಿ ಮಾತ್ರ ಸಭೆ ನಡೆದಿದೆ. ಕಲ್ಯಾಣಪುರ ಮತ್ತು ಕೆಮ್ಮಣ್ಣು ಗ್ರಾಪಂಗಳಲ್ಲಿ ಇನ್ನೂ ಪೂರ್ವಭಾವಿ ಸಭೆಯೇ ನಡೆದಿಲ್ಲ ಎಂದು ಅವರು ವಿವರಿಸಿದರು.

ಇದಕ್ಕೆ ಉತ್ತರಿಸಿದ ಸಿಇಓ ಸಿಂಧು ರೂಪೇಶ್, ನೆರೆ ಬರುವ ಸಾಧ್ಯತೆ ಇರುವ ಗ್ರಾಪಂಗಳನ್ನು ಗುರಿತಿಸಿ ಈಗಾಗಲೇ ಪ್ರಾಕೃತಿಕ ವಿಕೋಪದ ಕುರಿತಂತೆ ಸಭೆ ನಡೆಸಲು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಸಭೆ ನಡೆಯದ ಕಡೆ ಕೂಡಲೇ ನಡೆಸಲು ನಿರ್ದೇಶನ ನೀಡುತ್ತೇನೆ ಎಂದರು. ಮಳೆಗಾಲದಲ್ಲಿ ಅನೇಕ ಕಡೆ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿ ನೇತಾಡುತ್ತಿವೆ. ಅಪಾಯಕ್ಕೆ ಮುನ್ನ ಮೆಸ್ಕಾಂ ಇದನ್ನು ಸರಿಪಡಿಸುವಂತೆ ಸದಸ್ಯರು ಒತ್ತಾಯಿಸಿದರು.

ಕೊಳಲಗಿರಿಯಲ್ಲಿ ಅಪಾಯಕಾರಿಯಾಗಿರುವ ಬೃಹತ್ ಮರವನ್ನು ಎರಡು ದಿನದಲ್ಲಿ ತೆಗೆಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರೆ, ರೇಷನ್ ಕಾರ್ಡ್ ನೀಡಲು ಬಾಕಿ ಇರುವ 3089 ಪ್ರಕರಣಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ತಿಳಿಸಿದರು.

ಸರಕಾರದ ಸಂಧ್ಯಾ ಸುರಕ್ಷಾ ಹಾಗೂ ಪಿಂಚಣಿ ಸರಿಯಾದ ಸಮಯದಲ್ಲಿ ಸಿಗದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಇದರಲ್ಲಿ ಕೆಲವು ಸಮಸ್ಯೆಗಳಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಅವುಗಳನ್ನು ಬಗೆಹರಿಸಿ ಕೂಡಲೇ ಹಣ ಸಿಗುವಂತೆ ಕ್ರಮಕೈಗೊಳ್ಳುವುದಾಗಿ ಕುಂದಾಪುರ ಉಪವಿಭಾಗಾಧಿಕಾರಿಯವರು ಭರವಸೆ ನೀಡಿದರು.

ಆಧಾರ್ ತಿದ್ದುಪಡಿ: ಜಿಲ್ಲೆಯ ಗೇರುಬೀಜ ಕಾರ್ಖಾನೆಗಳಲ್ಲಿ ದುಡಿಯುವ ಬಡ ಮಹಿಳೆಯರ ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕ ದಲ್ಲಿ ತಪ್ಪಾಗಿರುವ ಕಾರಣ ಅವರ ಪಿಎಫ್ ಹಣ ಸಿಗದಿರುವ ಬಗ್ಗೆ, ಆಧಾರ್ ತಿದ್ದುಪಡಿಗೆ ಅವಕಾಶ ಮಾಡಿಕೊಡುವಂತೆ ಹಲವು ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆದರೂ ಸ್ಪಷ್ಟ ನಿರ್ಧಾರ ಮೂಡಿಬರಲಿಲ್ಲ.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಕೋಟ್ಯಾನ್,ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಗ್ರಾಪಂಗಳ ಪ್ರಗತಿ ಪರಿಶೀಲನೆಗೆ ತ್ರೈಮಾಸಿಕ ಕೆಡಿಪಿ
ಬಡತನ ನಿರ್ಮೂಲನೆ, ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಒದಗಿಸುವ ಕಾರ್ಯಕ್ರಮಗಳ ಅನುಷ್ಠಾನ, ಮಕ್ಕಳ ಮತ್ತು ಮಹಿಳೆಯರ ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಪಡಿತರ ಧಾನ್ಯಗಳ ಸಮರ್ಪಕ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ ನಿರ್ವಹಣೆ, ಪಶುಪಾಲನ ಚಿಕಿತ್ಸಾ ಕೇಂದ್ರಗಳ ಕಾರ್ಯನಿರ್ವಹಣೆ, ಗ್ರಾಪಂ ಹಂತದಲ್ಲಿ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ, ತರಗತಿಗಳ ನಿರ್ವಹಣೆ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆಗಳ ಅನುಷ್ಠಾನ ಹಾಗೂ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಲು ಗ್ರಾಪಂ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿ) ಪ್ರಗತಿ ಪರಿಶೀಲನೆಗೆ ಸರಕಾರ ನಿರ್ಧರಿಸಿದೆ.

ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿಗೆ ಗ್ರಾಪಂ ಅಧ್ಯಕ್ಷರು ಅಧ್ಯಕ್ಷರಾಗಿ ರುವರು. ಉಪಾಧ್ಯಕ್ಷರು ಉಪಾಧ್ಯಕ್ಷರು, ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿ ಯಾಗಿರುವರು. ಒಟ್ಟು 27 ಇಲಾಖೆಗಳ ಹೋಬಳಿ ಮಟ್ಟದ ಅಥವಾ ಗ್ರಾಪಂ ಮಟ್ಟದ ಅಧಿಕಾರಿಗಳು ಆಹ್ವಾನಿತರಾಗಿರುವರು.

ಆಯಾ ಗ್ರಾಪಂನ ಸದಸ್ಯ ಕಾರ್ಯದರ್ಶಿ (ಪಿಡಿಓ) ತ್ರೈಮಾಸಿಕ ಕೆಡಿಪಿ ಸಭೆ ಕರೆಯಲು ಕ್ರಮ ಕೈಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News