28 ವರ್ಷ ಹಳೆಯ ಪ್ರಕರಣದಲ್ಲಿ ಪತ್ರಿಕೆಯ ಸಂಪಾದಕರ ಬಂಧನ

Update: 2019-06-25 17:06 GMT

ಶ್ರೀನಗರ, ಜೂ.25: 28 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಶ್ರೀನಗರ ಮೂಲದ ಉರ್ದು ದೈನಿಕ ಆಫಕ್‌ನ ಮಾಲಕ-ಸಂಪಾದಕರನ್ನು ಬಂಧಿಸಿದ್ದಾರೆ.

 62 ವರ್ಷ ಪ್ರಾಯದ ಜೀಲಾನಿ ಖಾದ್ರಿಯವರನ್ನು ಅವರು ಸೋಮವಾರ ರಾತ್ರಿ 11.30ರ ವೇಳೆಗೆ ಮನೆಗೆ ಆಗಮಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. 1992ರಲ್ಲಿ ಜೆಕೆನ್ಯೂಸ್ ಎಂಬ ಪತ್ರಿಕೆಯನ್ನು ಕಾನೂನುಬಾಹಿರವಾಗಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಲಾನಿಯವರನ್ನು ಬಂಧಿಸಲಾಗಿದೆ. ಅವರು ಈ ಪತ್ರಿಕೆಯನ್ನು ನಿಷೇಧದ ನಡುವೆಯೂ ಹಂಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಉಗ್ರ ಮತ್ತು ವಿಧ್ವಂಸಕ ಚಟುವಟಿಕೆಗಳ (ಟಾಡ) ನ್ಯಾಯಾಲಯ ಖಾದ್ರಿ ವಿರುದ್ಧ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ ಅವರು ಪೊಲೀಸರ ಮುಂದೆ ಹಾಜರಾಗಲು ಸಿದ್ಧರಾಗಿದ್ದರು ಎಂದು ಖಾದ್ರಿ ಕುಟುಂಬ ತಿಳಿಸಿದೆ. ಖಾದ್ರಿ ಬಂಧನದಲ್ಲಿ ತನ್ನ ಸಹೋದ್ಯೋಗಿಗಳಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಹುನ್ನಾರ ಅಡಗಿದೆ ಎಂದು ರಾಜ್ಯದ ಪತ್ರಕರ್ತರ ಸಂಘ ಅನುಮಾನ ವ್ಯಕ್ತಪಡಿಸಿದೆ. 1992ರ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾದ್ರಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಅವರು ಪ್ರತಿದಿನ ಲಾಲ್ ಚೌಕ್‌ನಲ್ಲಿರುವ ತನ್ನ ಕಚೇರಿಗೆ ತೆರಳುತ್ತಿದ್ದರು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಕುಟುಂಬ ವರ್ಗ ತಿಳಿಸಿದೆ. ಇದೇ ಮಾದರಿಯ ಆರೋಪಗಳನ್ನು ಎದುರಿಸುತ್ತಿದ್ದ ಇಬ್ಬರು ಪತ್ರಕರ್ತರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಓರ್ವ ಆರೋಪಿತ ಪತ್ರಕರ್ತ ಗುಲಾಮ್ ಅಹ್ಮದ್ ಸೂಫಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಕಾಶ್ಮೀರದಲ್ಲಿರುವ ಪತ್ರಕರ್ತರ ಸಂಘಗಳು ಖಾದ್ರಿ ಬಂಧನವನ್ನು ಖಂಡಿಸಿವೆ. ಈ ಬಂಧನ ಸ್ಥಳೀಯ ಮಾಧ್ಯಮಗಳ ಧ್ವನಿಯನ್ನು ಉಡುಗಿಸಲು ಮಾಡಿದ ಪ್ರಯತ್ನವಾಗಿದೆ ಎಂದು ಪತ್ರಕರ್ತರ ಒಕ್ಕೂಟ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News